ಹಿಂದುಳಿದ, ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರು: ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ರಾಜ್ಯದ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಗೊತ್ತಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ ಜಾಗ ಮಂಜೂರಿಗೆ ನಿರ್ಧರಿಸಲಾಗಿದೆ. ಆ ಪ್ರಕಾರ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ. 57 ಮತ್ತು 58ರಲ್ಲಿರುವ ಸರಕಾರಿ ಜಮೀನು ಮಠಗಳಿಗೆ ಲಭ್ಯವಾಗಲಿದೆ.
ಅದೇ ರೀತಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಸೋರು ಕಲ್ಪಿಸಲು 100 ಕೋಟಿ ರೂಪಾಯಿ ಮೊತ್ತದಲ್ಲಿ, 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯಪಾಲರ ನಡೆಗೆ ಆಕ್ರೋಶ?:
‘ಜಂಟಿ ಅಧಿವೇಶನದಲ್ಲಿ ರಾಜ್ಯ ಸರಕಾರದ ಭಾಷಣ ಓದದೇ ತೆರಳಿದ ರಾಜ್ಯಪಾಲರ ನಡೆಗೆ ಸಚಿವ ಸಂಪುಟ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜ್ಯಪಾಲರನ್ನು ವಾಪಸ್ಸು ಕರೆಸಿಕೊಳ್ಳುವಂತೆ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ’ ಎಂದು ತಿಳಿದು ಬಂದಿದೆ.







