ರಾಜ್ಯದ ಪ್ರತಿ ನಗರದಲ್ಲಿ ಸಂಚಾರ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ (Photo:X)
ಬೆಂಗಳೂರು: ಭವಿಷ್ಯದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ ನಗರಗಳಲ್ಲೂ ಸಂಚಾರ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ರವಿವಾರ ನಗರದ ಕುಮಾರಕೃಪಾ ಬಳಿಯಲ್ಲಿನ ತಮ್ಮ ಸರಕಾರಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ 2-3ನೆ ಹಂತದ ನಗರಗಳ ಬಗ್ಗೆಯೂ ಹಲವು ಕಂಪೆನಿಗಳು ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು. ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ರೂಪಿಸಬೇಕು. ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಉಲ್ಲೇಖಿಸಿದರು.
ಸಮಯವೇ ಹಣ, ಯಾರೂ ಸಹ ಸಮಯ ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾವು ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ನಾನು, ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ಸೇರಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದೂ ಅವರು ತಿಳಿಸಿದರು.
ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 70% ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದಾಗಿದೆ. ನಮ್ಮ ಪ್ರಗತಿ ನೋಡಿ ಅವರು ಈ ಲೆಕ್ಕಾಚಾರ ಮಾಡಿದ್ದಾರೆ. ಇದಕ್ಕೆ ಯಾವ ತಯಾರಿ ನಡೆಸಿದ್ದೀರಿ ಎಂದು ಕೇಳಿದರು. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ. ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ. ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಅಧಿಸೂಚನೆ ಹೊರಡಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
ಹೂಡಿಕೆ ಬಗ್ಗೆ ಚರ್ಚೆ: ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪೆನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ನೀರು, ವಿದ್ಯುತ್ ಪ್ರಮಾಣ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಂಪೆನಿಗಳು ಪಡೆದಿವೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿ ಭಾರತೀಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ ಶೇ.50 ನಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ಬಿಡದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿಗೆ ಅನೇಕರು ಉತ್ಸುಕರಾಗಿದ್ದಾರೆ. ಈ ಯೋಜನೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿರಬಹುದು. ಕೆಲವರು ಕೆಲವು ರೈತರಿಂದ ಇದಕ್ಕೆ ವಿರೋಧವಿದೆ ಎನ್ನುವಂತೆ ಮಾಡುತ್ತಿದ್ದಾರೆ. ಅವರಿಗೆ ಒಂದು ಮಾತು ಹೇಳುತ್ತೇನೆ. ರೈತರು ತಾವಾಗಿಯೇ ಜಮೀನು ಬಿಟ್ಟುಕೊಡುವಾಗ ಈ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಯ ಭೂಸಂತ್ರಸ್ತ ರೈತರಿಗೆ ನಾವು ನೀಡಿರುವ ಪರಿಹಾರದ ಅವಕಾಶವನ್ನು ದೇಶದ ಇತರೆ ಯಾವುದೇ ಭಾಗದಲ್ಲಿ ನೀಡಲು ಸಾಧ್ಯವಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹಾರೀಸ್ ಸೇರಿದಂತೆ ಪ್ರಮುಖರಿದ್ದರು.
ಕಾನೂನು ಪಾಲನೆ, ಶಿಸ್ತಿನ ಬಗ್ಗೆ ಪ್ರಜ್ಞೆ:
‘ಇಡೀ ದಾವೋಸ್ ನಮ್ಮ ಸದಾಶಿವನಗರ, ಅರಮನೆ ಮೈದಾನದಷ್ಟು ವ್ಯಾಪ್ತಿಯಲ್ಲಿರಬಹುದು. ಅಷ್ಟು ಸಣ್ಣ ಪ್ರದೇಶದಲ್ಲಿ ಎಲ್ಲ ಪ್ರಮುಖ ನಾಯಕರು ರಸ್ತೆ ಮಾರ್ಗದಲ್ಲೇ ಸಂಚಾರ ಮಾಡಿದರು. ನಾನು ಜ್ಯೂರಿಚ್ ಕಡೆ 200 ಕಿ.ಮೀ ಪ್ರಯಾಣ ಮಾಡುವಾಗ ಸುಮಾರು 30-40 ಟನಲ್ ರಸ್ತೆಗಳಿವೆ. 60 ವರ್ಷಗಳ ಹಿಂದೆಯೇ ಟನಲ್ ರಸ್ತೆ ನಿರ್ಮಿಸಿದ್ದಾರೆ. ಅಲ್ಲಿ ಶಿಸ್ತು, ಸಂಚಾರ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಗಮನಿಸಿದೆ. ಈ ಪ್ರವಾಸ ರಾಜ್ಯಕ್ಕೆ ಇದೊಂದು ಫಲಪ್ರದಾಯಕ ಕಾರ್ಯಕ್ರಮವಾಗಿತ್ತು. ನಮ್ಮಲ್ಲಿ ಬಂಡವಾಳ ಆಕರ್ಷಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ತಮ ವೇದಿಕೆಯಾಗಿತ್ತು. ನಮ್ಮ ಜನರು ಕಾನೂನಿಗೆ ಗೌರವ ನೀಡುವ ಪ್ರಜ್ಞೆ ಮೂಡಿಸಬೇಕು. ಅಲ್ಲಿ ಯಾವುದೇ ವಾಹನ ಬೇರೆ ವಾಹನವನ್ನು ಓವರ್ ಟೇಕ್ ಮಾಡುತ್ತಿರಲಿಲ್ಲ. ಶಿಸ್ತಿನ ವಿಚಾರದಲ್ಲಿ ನಾವು ಅರಿವು ಮೂಡಿಸಬೇಕಿದೆ’ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಜಾಗತಿಕ ನಾಯಕರು, ಉದ್ಯಮಿಗಳ ಭೇಟಿ:
‘ನಾನು ಈ ಕಾರ್ಯಕ್ರಮದ ವೇಳೆ ವಿಶ್ವ ಬ್ಯಾಂಕಿನ ಮುಖ್ಯಸ್ಥರಾದ ಅಜಯ್ ಬಂಗಾ, ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ್ ಅವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಪ್ರಹ್ಲಾದ್ ಜೋಷಿ, ರಾಮ್ ಮೋಹನ್ ನಾಯ್ಡು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಿಜಲೆರ್ಂಡ್ ಭಾರತೀಯ ರಾಯಭಾರಿ ಮಾರ್ಡು ಕುಮಾರ್ ಅವರು ನಮ್ಮ ಕರ್ನಾಟಕ ಪೆವಿಲಿಯನ್ಗೆ ಬಂದು ಚರ್ಚೆ ಮಾಡಿದರು.
ಸೌದಿ ಅರೆಬಿಯಾ ಆರ್ಥಿಕ ಸಚಿವರನ್ನು ಭೇಟಿ ಮಾಡಲಾಯಿತು. ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಅನೇಕರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಅಮೆರಿಕದ ಕಂಪೆಗಳು ಕೂಡ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ದಾವೋಸ್ನ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಚರ್ಚೆಯಾದ ಹೂಡಿಕೆ, ವ್ಯವಹಾರ, ಆಡಳಿತ ನೀತಿ ಸೇರಿದಂತೆ ಹಲವು ವಿಷಯಗಳ ಕುರಿತು, ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರಿಗೆ ಮಾಹಿತಿ ನೀಡಿದೆ.
— DK Shivakumar (@DKShivakumar) January 25, 2026
ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದು ನನಗೆ ಹೊಸ… https://t.co/2KjCqgsjJ1







