ಕಬ್ಬು ಬೆಳೆಗಾರರಿಗೆ 300 ಕೋಟಿ ರೂ. ಬಿಡುಗಡೆ: ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ರಾಜ್ಯ ಸರಕಾರ ಘೋಷಣೆ ಮಾಡಿದಂತೆ 2025-26ನೆ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‍ಗೆ 50 ರೂ.,ಗಳ ಆರ್ಥಿಕ ನೆರವಿನ ಮೊತ್ತ ಅನ್ವಯ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಇತ್ತೀಚಿಗೆ ಕರೆದಿದ್ದ ಸಕ್ಕರೆ ಕಾರ್ಖಾನೆಗಳ ಮಾಲಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‍ಆರ್‍ಪಿ ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು. ಅದರಂತೆ ಆರ್ಥಿಕ ನೆರವಿನಲ್ಲಿ ರಾಜ್ಯ ಸರಕಾರ 50 ರೂ., ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ., ನೀಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಈ ನಿರ್ಧಾರದಂತೆ ರಾಜ್ಯ ಸರಕಾರ ತನ್ನ ಪಾಲಿನ ಆರ್ಥಿಕ ನೆರವಿನ ಹಣ 300 ಕೋಟಿ ರೂ., ಬಿಡುಗಡೆ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ರೈತರು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್‍ಗೆ 50 ರೂ.ಗಳಂತೆ ಜಮಾ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಅದೇ ರೀತಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಪ್ರತಿ ಟನ್ ಕಬ್ಬಿಗೆ 50 ರೂ., ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
2025-26ನೆ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, 29 ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಮುಕ್ತಾಯವಾಗಿದೆ. ಇದುವರೆಗೆ 521 ಲಕ್ಷ ಮೆಟ್ರಿಕ್ ಕಬ್ಬು ನುರಿಸಲಾಗಿದ್ದು, ಈ ಹಂಗಾಮಿನಲ್ಲಿ ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆ ಇದೆ. ಮಾರ್ಚ್ ಮೊದಲ ವಾರದ ವೇಳೆಗೆ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ ಅಂತ್ಯವಾಗಲಿದ್ದು, 600 ಲಕ್ಷ ಮೆಟ್ರಿಕ್ ಟನ್ ನುರಿಸುವ ಅಂದಾಜು ಆಧರಿಸಿ ರೂ 300 ಕೋಟಿ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






