ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ದೇಶಕ್ಕೇ ಮಾದರಿಯಾಗಿದೆ: ಸಿಜೆಐ ಸೂರ್ಯಕಾಂತ್

ಬೆಂಗಳೂರು: ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಲೋಕಾಯುಕ್ತ ಸಂಸ್ಥೆಯು ತಾಂತ್ರಿಕ ಮತ್ತು ಕಾನೂನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ. ಲೋಕಾಯುಕ್ತ ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ಎಚ್ಚರವಹಿಸುವುದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ ನೀಡಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಲೋಕಾಯುಕ್ತ ಸಂಸ್ಥೆಗೆ ನಲವತ್ತರ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಎಂಬ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಕೇವಲ ಶಿಕ್ಷೆಯೊಂದೇ ಸಾಲದು, ನೈತಿಕ ಮೌಲ್ಯಗಳ ಜಾಗೃತಿಯೂ ಆಗಬೇಕು. ಹೀಗಾಗಿ ಲೋಕಾಯುಕ್ತ ಸಂಸ್ಥೆಯು ಕೇವಲ ದಂಡಿಸುವ ಸಂಸ್ಥೆಯಾಗದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯೂ ಆಗಲಿ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ದೇಶಕ್ಕೇ ಮಾದರಿಯಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಪ್ರಬಲವಾದ ಮತ್ತು ಸ್ವಾಯತ್ತವಾದ ಇತಿಹಾಸವನ್ನು ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವುದು ಕೇವಲ ಸರಕಾರದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಹೊಣೆಗಾರಿಕೆಯೂ ಆಗಿದೆ ಎಂದು ಅವರು ಹೇಳಿದರು.
ಲೋಕಾಯುಕ್ತ ಸಂಸ್ಥೆಯು 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳುತ್ತಿದೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಈ ಸಂಸ್ಥೆಯು ನಾಗರಿಕರ ಆಶಾಕಿರಣವಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಲೋಕಾಯುಕ್ತದಂತಹ ಸಂಸ್ಥೆಗಳ ಪಾತ್ರ ದೊಡ್ಡದಿದೆ. ತಳಮಟ್ಟದ ಜನರಿಗೂ ನ್ಯಾಯ ಸಿಗುವಂತಾಗಲು ಈ ಸಂಸ್ಥೆಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ಕರ್ನಾಟಕದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ತರುವುದು ಮತ್ತು ಆಡಳಿತ ಯಂತ್ರದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವುದೇ ಲೋಕಾಯುಕ್ತ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪ್ರವಾಸಗಳು ಮತ್ತು ಲೋಕ್ ಅದಾಲತ್‍ಗಳ ಮೂಲಕ ನಾವು ಹಳ್ಳಿಗಾಡಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಸರಕಾರದ ಸೌಲಭ್ಯಗಳು ಅರ್ಹರಿಗೆ ತಲುಪದಿದ್ದಾಗ ಅಥವಾ ವಿಳಂಬವಾದಾಗ ಹಸ್ತಕ್ಷೇಪ ಮಾಡಿದವರ ಮೇಲೆ ಕ್ರಮಕೈಗೊಂಡು ಜನರಲ್ಲಿ ನಂಬಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಅರವಿಂದ ಕುಮಾರ್, ಉಪಲೋಕಾಯುಕ್ತ ಕೆ.ಎನ್. ಪಣೀಂದ್ರ, ಬಿ. ವೀರಪ್ಪ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
‘ಭ್ರಷ್ಟಾಚಾರ ಕೇವಲ ಹಣದ ವ್ಯವಹಾರವಲ್ಲ, ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡುವುದೂ ಒಂದು ರೀತಿಯ ಭ್ರಷ್ಟಾಚಾರವೇ ಆಗಿದೆ. ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಲೋಕಾಯುಕ್ತಕ್ಕೆ ದೂರುಗಳು ಬರುವ ಸಂಖ್ಯೆ ಕಡಿಮೆಯಾಗುತ್ತದೆ’
-ನ್ಯಾ. ಬಿ.ಎಸ್. ಪಾಟೀಲ್, ಕರ್ನಾಟಕದ ಲೋಕಾಯುಕ್ತ






