ಬೆಂಗಳೂರಿನಲ್ಲಿ ಮೇ 16ರಂದು 'ಕರ್ನಾಟಕ ಮುಸ್ಲಿಂ ಸಮಾವೇಶ'

ಬೆಂಗಳೂರು : ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು ಹಾಗೂ ಒಕ್ಕೂಟಗಳ ವತಿಯಿಂದ ಮೇ 16, ರಂದು ಶನಿವಾರ ಬೆಂಗಳೂರಿನ ಟೌನ್ ಹಾಲ್‌ನಲ್ಲಿ 'ಕರ್ನಾಟಕ ಮುಸ್ಲಿಂ ಸಮಾವೇಶ' ಆಯೋಜಿಸಲಾಗಿದೆ. ಈ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ 'ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?' ಎಂಬ ಶೀರ್ಷಿಕೆಯಡಿ ಸರಕಾರದ ಮೂರು ವರ್ಷಗಳ ಕಾರ್ಯವೈಖರಿಯ ಕುರಿತಾದ ಸಮಗ್ರ ವರದಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ, ಸಮಾವೇಶದ ಬಳಿಕ ವರದಿಯನ್ನು ಸರಕಾರಕ್ಕೆ ಹಾಗೂ ಎಲ್ಲ ಶಾಸಕರಿಗೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ಸರಕಾರಕ್ಕೆ ಮೇ 20 ಕ್ಕೆ ಮೂರು ವರ್ಷ ಪೂರ್ಣವಾಗುತ್ತಿರುವ ಹೊತ್ತಲ್ಲೇ ಈ ಸಮಾವೇಶ ನಡೆಯುತ್ತಿರುವುದು ಗಮನಾರ್ಹವಾಗಿದೆ. ಕಾಂಗ್ರೆಸ್ ಗೆ ನಾವು ಸಂಪೂರ್ಣ ಬೆಂಬಲ ನೀಡಿ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರೂ ಕಾಂಗ್ರೆಸ್ ನಮ್ಮನ್ನ ನಿರ್ಲಕ್ಷಿಸುತ್ತಿದೆ ಎಂದು ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗುತ್ತಿಲ್ಲ , ಅವರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಹಾಗು ಪಕ್ಷದಲ್ಲಿ ದಶಕಗಳಿಂದ ದುಡಿದಿದ್ದ ಹಿರಿಯ ಮುಸ್ಲಿಂ ನಾಯಕರನ್ನು ಅಮಾನತು ಮಾಡಿರುವ ಬೆಳವಣಿಗೆಯೂ ನಡೆದಿದೆ. ಅದೇ ಹೊತ್ತಲ್ಲಿ ಕಾಂಗ್ರೆಸ್ ಸರಕಾರ ಮಾಡಿದ್ದೇನು ಎಂಬ ಪ್ರಶ್ನೆ ಕೇಳುವ, ಮುಂದೇನು ಆಗಬೇಕಾಗಿದೆ ಎಂಬ ಬೇಡಿಕೆ ಮಂಡಿಸುವ ಈ ಸಮಾವೇಶ ನಡೆಯುತ್ತಿದೆ.
ಮೇ 6ರಂದು ಬೆಂಗಳೂರಿನ ಶಿವಾಜಿನಗರದಲ್ಲಿರುವ ಎಜೆ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು, ಉಲೇಮಾ ಸಂಘಟನೆಗಳು, ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (KRMO) ಅಡ್ ಹಾಕ್ ಸಮಿತಿಯ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಸಭೆಯಲ್ಲಿ ಹಿರಿಯ ಉಲೇಮಾಗಳು, ಜಮಾಅತ್ ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (KRMO) ಅಡ್ ಹಾಕ್ ಸಮಿತಿಯ ಸದಸ್ಯರು ಸೇರಿ 75ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.
KRMO ಅಡ್ ಹಾಕ್ ಸಮಿತಿಯ ವರದಿ ತಯಾರಿ ತಂಡದ ಸದಸ್ಯರು ಹಾಗು ವಿವಿಧ ಕ್ಷೇತ್ರಗಳ ಪರಿಣತರು ತಯಾರಿಸಿದ ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗೂ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ಭರವಸೆಗಳು ಎಷ್ಟು, ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯ ಹಾಗೂ ಈಗ ಸರಕಾರಕ್ಕೆ ನಮ್ಮ ಬೇಡಿಕೆಗಳ ಕುರಿತ ಸಂಪೂರ್ಣ ವರದಿಯನ್ನು ಈ ಸಭೆಯಲ್ಲಿ ಮಂಡಿಸಲಾಯಿತು.
ವರದಿಯಲ್ಲಿರುವ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ - ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ - ಶಿಕ್ಷಣ ಕ್ಷೇತ್ರದ ಅನುದಾನ ಸಹಿತ ವಿವಿಧ ವಿಷಯಗಳ ಬಗ್ಗೆ ಎಲ್ಲರಿಂದಲೂ ಸಲಹೆ, ಸೂಚನೆಗಳು ಬಂದವು. ಅವುಗಳನ್ನು ವಿವರವಾಗಿ ಚರ್ಚಿಸಿ ವರದಿಯಲ್ಲಿ ಮಾಡಬೇಕಾದ ತಿದ್ದುಪಡಿಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಮುಸ್ಲಿಮರನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಸರಕಾರ ಹಾಗು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಹೀಗೆ ನಡೆಸಿಕೊಳ್ಳುವುದನ್ನು ಮುಂದುವರೆಸಿದರೆ ಸಮುದಾಯ ತನ್ನ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಅಭಿಪ್ರಾಯ ಎಲ್ಲರಿಂದಲೂ ವ್ಯಕ್ತವಾಯಿತು.
ಬಳಿಕ ಮೇ 16, 2026 ರಂದು ಶನಿವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಈ ವರದಿಯನ್ನು ರಾಜ್ಯದ ಮುಸ್ಲಿಂ ಸಂಘಟನೆಗಳು, ಜಮಾಅತ್ ಗಳು, ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳ ವತಿಯಿಂದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಬಿಡುಗಡೆ ಮಾಡುವುದು ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಆ ಸಮಾವೇಶದ ಹೆಸರು 'ಕರ್ನಾಟಕ ಮುಸ್ಲಿಂ ಸಮಾವೇಶ - ಕಾಂಗ್ರೆಸ್ ಸರಕಾರ ಹೇಳಿದ್ದೇನು ? ಮಾಡಿದ್ದೇನು ? ಮುಂದೇನು ? ವರದಿ ಬಿಡುಗಡೆ ' ಎಂದಾಗಿರುತ್ತದೆ.
ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರು ಬಂದು ಸೇರಿ 'ಕರ್ನಾಟಕ ಮುಸ್ಲಿಂ ಸಮಾವೇಶ'ದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂದೇಶ ರವಾನಿಸಬೇಕು ಎಂದು ಎಲ್ಲರೂ ಸರ್ವಾನುಮತದಿಂದ ಸೂಚಿಸಿದರು. ಮೇ 16ರ ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ ಪ್ರತಿಯೊಂದು ಜಿಲ್ಲೆಯಿಂದಲೂ ಜನರು ಬರುವ ಹಾಗೆ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಜಮಾಅತ್ ಗಳು ಶ್ರಮಿಸಬೇಕು ಎಂದು ನಿರ್ಧರಿಸಲಾಯಿತು.
ಮೇ 16 ರಂದು 'ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ' ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ. ಬಿಡುಗಡೆಯಾದ ಕಾಂಗ್ರೆಸ್ ಸರಕಾರದ ಮೂರು ವರ್ಷದ ಕಾರ್ಯವೈಖರಿ ಕುರಿತ ವರದಿಯನ್ನು ಸಭೆಯ ಬಳಿಕ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ, ಸಚಿವರು ಹಾಗು ಶಾಸಕರುಗಳಿಗೆ ತಲುಪಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.






