ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಜೊತೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಭೆ

ಬೆಂಗಳೂರು : ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ(ಕೆಆರ್‌ಎಂಒ)ದ ಸಭೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸದಸ್ಯರೊಂದಿಗೆ ಮಾತುಕತೆ ನಡೆಸಿದರು . ರಾಜ್ಯದಲ್ಲಿನ ಮುಸ್ಲಿಮ್ ಸಮುದಾಯದ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿತು.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕೆ ಆರ್ ಎಂ ಓ ಸಭೆಗೆ ಬಂದ ಹರಿಪ್ರಸಾದ್ ಅವರಿಗೆ ಕೆಆರ್‌ಎಂಒ ಸಮಿತಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿತು.
ಅಲ್ಲದೇ, ಕೆಆರ್‌ಎಂಒ ವತಿಯಿಂದ ಪ್ರಕಟಿಸಲಾಗಿರುವ ‘ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ವರದಿ ಹಾಗೂ ಆಗ್ರಹಗಳ ಪಟ್ಟಿಯನ್ನು ಒಳಗೊಂಡ ಪುಸ್ತಕವನ್ನು ಹರಿಪ್ರಸಾದ್ ಅವರಿಗೆ ನೀಡಲಾಯಿತು.
ಭರವಸೆಗಳು: ಬಿಜೆಪಿ ಸರಕಾರವು ರದ್ದುಪಡಿಸಿದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವುದು, ಮತಾಂತರ ನಿಷೇಧ ಕಾನೂನು ಹಿಂಪಡೆಯಬೇಕು, ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣಾ ಕಾಯ್ದೆ-2020 ಅನ್ನು ರದ್ದುಪಡಿಸಬೇಕು ಅಥವಾ ತಿದ್ದುಪಡಿ ಮಾಡಬೇಕು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವರ್ಷಕ್ಕೆ 10 ಸಾವಿರ ಕೋಟಿ ರೂ.ಮೀಸಲಿರಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಬೇಕು,
ರಾಜ್ಯದಲ್ಲಿನ ವಕ್ಫ್ ಆಸ್ತಿಗಳನ್ನು ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಅಗತ್ಯ ಯೋಜನೆಗಳನ್ನು ರೂಪಿಸಬೇಕು, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು, ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದ್ವೇಷ ಭಾಷಣ, ದ್ವೇಷ ಅಪರಾಧ, ದ್ವೇಷ ಪ್ರಚಾರಕ್ಕೆ ಕಡಿವಾಣ ಹಾಕಬೇಕು, ಶಾಸನ ಸಭೆಗಳಲ್ಲಿ ಮತ್ತು ಸರಕಾರದ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳಲ್ಲಿ ಮುಸ್ಲಿಮರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಹಾಗೂ ಎಸ್ ಐ ಆರ್ ಬಗ್ಗೆ ಸೂಕ್ತ ರಾಜಕೀಯ ತಂತ್ರ ರೂಪಿಸಬೇಕು ಎಂದು ನಿಯೋಗ ಆಗ್ರಹಿಸಿತು.
ಕೆಆರ್‌ಎಂಒ ನಿಯೋಗದ ಆಗ್ರಹವನ್ನು ಆಲಿಸಿದ ಹರಿಪ್ರಸಾದ್ ಅವರು, ಮುಂಬರುವ ಚಳಿಗಾಲದ ಅಧಿವೇಶನದ ವೇಳೆಗೆ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದೇ ರೀತಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಕೆಆರ್‌ಎಂಒ ಸಹ ಮಾಡಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ದಲಿತ ಸಂಘಟನೆಗಳ ಮುಖಂಡರೊಂದಿಗೂ ಹರಿಪ್ರಸಾದ್ ಚರ್ಚೆ ನಡೆಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಮುಖಂಡರಾದ ಮುಹಮ್ಮದ್ ಯಾಸೀನ್ ಮಲ್ಪೆ, ಸುಹೇಲ್ ಅಹ್ಮದ್ ಮರೂರು, ಯಹ್ಯಾ ದಾಮೂದಿ, ಹಾರಿಸ್ ಸಿದ್ದೀಕಿ, ತನ್ವೀರ್ ಅಹ್ಮದ್, ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ರಾಮನಗರದ ರೈತ ಮುಖಂಡ ಕುಮಾರಸ್ವಾಮಿ, ಎಸ್.ಕೆ.ಪಿ.ಅಧ್ಯಕ್ಷ ಅರುಣ್ ಗೌಡ್, ಯಶವಂತಪುರ ಎಪಿಎಂಸಿ ರೈತ ಸಂಘದ ಅಧ್ಯಕ್ಷ ಅರುಣ್ ಪರಮೇಶ್, ಮಹಿಳಾ ರೈತ ನಾಯಕಿ ರಮ್ಯಾ ರಾಮಣ್ಣ, ರಾಜ್ಯ ರೈತ ಸಂಘದ ಮುಖಂಡರಾದ ರತ್ನಮ್ಮ, ಶ್ರೀಮತಿ, ಸಂದೀಪ್ ಸೇರಿದಂತ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯದ ಕ್ರೈಸ್ತ ಸಮುದಾಯದ ಪ್ರಮುಖ ಸಂಘಟನೆಗಳು ಹಾಗೂ ಮುಖಂಡರೊಂದಿಗೂ ಕೆಆರ್ ಎಂಒ ಸಂವಾದ ನಡೆಸಿತು.






