ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಪತ್ತೆಯಾದ ವಿದೇಶಿಗರ ಸಂಖ್ಯೆ ಸಾವಿರಕ್ಕಿಂತ ಕಡಿಮೆ : ಮುಖ್ಯ ಚುನಾವಣಾಧಿಕಾರಿ
ಜಿಲ್ಲಾವಾರು ಅಂತಿಮ ಮತದಾರರ ಪಟ್ಟಿ; ಇಲ್ಲಿದೆ ಮಾಹಿತಿ...

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಬಳಿಕ ಭಾರತ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಿದ್ದು, ರಾಜ್ಯದಲ್ಲಿ 4,55,00,011 ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ, ಎಸ್‍ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿದ್ದ 99,32,303 ಹೆಸರುಗಳನ್ನು ಕೈ ಬಿಡಲಾಗಿದೆ.
ಮಂಗಳವಾರ ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಎಸ್‍ಐಆರ್ ಬಳಿಕ ರಾಜ್ಯದಲ್ಲಿ 4,55,00,011 ಮತದಾರರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿದೆ. ಈ ಪೈಕಿ ಪುರುಷ ಮತದಾರರು 2,25,83,107, ಮಹಿಳಾ ಮತದಾರರು 2,29,14,063, ಇತರೆ ಮತದಾರರು 2,841, ವಿಕಲಚೇತನ ಮತದಾರರು 5,65,340, 85 ವರ್ಷ ಮೇಲ್ಪಟ್ಟವರು 3,92,134, ಅನಿವಾಸಿ ಭಾರತೀಯ ಮತದಾರರು 3,252, ಸೇವಾ ಮತದಾರರು 44,322 ಮಂದಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಪತ್ತೆಯಾದ ವಿದೇಶಿಗರ ಸಂಖ್ಯೆ ಸಾವಿರಕ್ಕಿಂತ ಕಡಿಮೆ :
ರಾಜ್ಯದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ 110 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಿದೆ. ಈ ಪೈಕಿ ಜಾಹೀರಾತುಗಳಿಗೆ ಹೆಚ್ಚಿನ ಹಣ ಖರ್ಚಾಗಿದೆ. ಎಸ್‍ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ವಿದೇಶಿಗರ ಸಂಖ್ಯೆಯನ್ನು ಪತ್ತೆಹಚ್ಚಲಾಗಿದ್ದು, ಆ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದೆ. ಪ್ರಕ್ರಿಯೆ ವೇಳೆ ಒಟ್ಟು 14 ಅಧಿಕಾರಿಗಳು ಮೃತಪಟ್ಟಿದ್ದಾರೆ. ಮೃತ ಅಧಿಕಾರಿಗಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರವನ್ನು ಭಾರತೀಯ ಮುಖ್ಯ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ ಎಂದು ಅನ್ಬುಕುಮಾರ್ ಪ್ರತಿಕ್ರಿಯಿಸಿದರು.
ಜಿಲ್ಲಾವಾರು ಅಂತಿಮ ಮತದಾರರ ಪಟ್ಟಿ :
ಬೆಳಗಾವಿ-36,35,860, ಬೆಂಗಳೂರು ನಗರ-24,01,939, ಮೈಸೂರು-22,80,067, ತುಮಕೂರು-20,94,762, ಕಲಬುರಗಿ-18,94,144, ವಿಜಯಪುರ-17,08,099, ದಕ್ಷಿಣ ಕನ್ನಡ-16,78,448, ಮಂಡ್ಯ-14,27,462, ರಾಯಚೂರು-14,24,909, ಬಾಗಲಕೋಟೆ-14,13,341, ಹಾಸನ-13,93,908, ಧಾರವಾಡ-13,78,016, ಶಿವಮೊಗ್ಗ-13,54,046, ಬಿಬಿಎಂಪಿ ಉತ್ತರ-13,25,284, ದಾವಣಗೆರೆ-13,20,819 ಚಿತ್ರದುರ್ಗ-13,17,025, ಬೀದರ್-12,46,746, ಹಾವೇರಿ-12,33,294, ಉತ್ತರ ಕನ್ನಡ-11,39,623, ಕೋಲಾರ-11,39,393, ಬಿಬಿಎಂಪಿ ದಕ್ಷಿಣ-11,13,554, ಬಿಬಿಎಂಪಿ ಕೇಂದ್ರ-10,67,374, ಕೊಪ್ಪಳ-10,59,164, ಬಳ್ಳಾರಿ-10,20,264, ಉಡುಪಿ-10,14,143, ವಿಜಯನಗರ-10,08,367, ಚಿಕ್ಕಬಳ್ಳಾಪುರ-9,53,372, ಯಾದಗಿರಿ-8,87,174, ಚಿಕ್ಕಮಗಳೂರು-8,74,462, ರಾಮನಗರ-8,39,039, ಬೆಂಗಳೂರು ಗ್ರಾಮಾಂತರ-8,04,534 ಚಾಮರಾಜನಗರ-8,00,858, ಗದಗ-7,94,567 ಕೊಡಗು-4,11,632.






