Karnataka SIR | ಕರಡು ಮತದಾರರ ಪಟ್ಟಿ ಪ್ರಕಟ; 43.81 ಲಕ್ಷ ಮತದಾರರಿಗೆ ನೋಟಿಸ್ ಪ್ರಕ್ರಿಯೆ ಆರಂಭ: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್
► ಸೆ.23ರವರೆಗೆ ಆಕ್ಷೇಪಣೆಗೆ ಅವಕಾಶ ►ಅತೀ ಹೆಚ್ಚು ನೋಟಿಸ್ ಪಡೆಯುವ ಜಿಲ್ಲೆಗಳು ಯಾವುವು?

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೋಮವಾರ(ಆ.24) ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ 4,46,80,151 ಮತದಾರರಿದ್ದು, ಈ ಪೈಕಿ 43,81,335 ಮಂದಿಗೆ ಮತದಾರರ ನೋಂದಣಾಧಿಕಾರಿ(ಇಆರ್ಒ) ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ(ಎಇಆರ್ಒ) ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ಸೋಮವಾರ ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿ (ನಿರ್ವಾಚನ ಸದನ)ಯಲ್ಲಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ಯುಮರೇಷನ್ ಫಾರಂ(ಗಣತಿ ನಮೂನೆ)ನಲ್ಲಿ ಸಲ್ಲಿಕೆ ಮಾಡಿರುವ ಮಾಹಿತಿಯಲ್ಲಿ ವೈಪರೀತ್ಯ ಕಂಡು ಬಂದಿರುವ 20,35,835 ಮತದಾರರು ಹಾಗೂ ಮ್ಯಾಪಿಂಗ್ ಆಗದೆ ಇರುವ 23,45,500 ಮತದಾರರು ಸೇರಿ ಒಟ್ಟು 43,81,335 ಮಂದಿಗೆ ನೋಟಿಸ್ ಜಾರಿಯಾಗಲಿದೆ ಎಂದರು.
ಆ.31ರಿಂದ ನೋಟಿಸ್ಗಳಿಗೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಲಿದೆ. ಆ.24ರಿಂದ ಸೆ.23ರವರೆಗೆ ಆಕ್ಷೇಪಣೆಗಳು ಹಾಗೂ ಕ್ಲೇಮುಗಳನ್ನು ಸಲ್ಲಿಸಬಹುದಾಗಿದೆ. ಆ.24ರಿಂದ ಅ.22ರವರೆಗೆ ನೋಟಿಸ್, ಆಕ್ಷೇಪಣೆಗಳು ಹಾಗೂ ಕ್ಲೇಮುಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಲು ಅವಧಿ ನಿಗದಿಪಡಿಸಲಾಗಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.
3926 ಎಇಆರ್ಒ ನೇಮಕ:
ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 224 ಮತದಾರರ ನೋಂದಣಾಧಿಕಾರಿಯಿದ್ದು, 336 ಸಹಾಯಕ ಮತದಾರರ ನೋಂದಣಾಧಿಕಾರಿಗಳಿದ್ದಾರೆ. ಇದೀಗ ಹೆಚ್ಚುವರಿಯಾಗಿ 3926 ಮಂದಿ ಸಹಾಯಕ ಮತದಾರರ ನೋಂದಣಾಧಿಕಾರಿ ಗಳನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಮತದಾರರಿಗೆ ಯಾವ ರೀತಿ ನೋಟಿಸ್ ನೀಡಬೇಕು, ಯಾವ ದಾಖಲೆಗಳನ್ನು ಕೇಳಬೇಕು, ಅವುಗಳ ಪರಿಶೀಲನೆ ಹೇಗಿರಬೇಕು ಎಂಬುದರ ಕುರಿತು ತರಬೇತಿಯನ್ನು ನೀಡಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ಬಿಎಲ್ಒಗಳ ಮೂಲಕ ಮನೆಗೆ ನೋಟಿಸ್:
ಮತದಾರರ ನೋಂದಣಾಧಿಕಾರಿ ಜಾರಿಗೊಳಿಸುವ ನೋಟಿಸ್ನಲ್ಲಿ ಯಾವ ಕಾರಣಕ್ಕಾಗಿ ನೋಟಿಸ್ ನೀಡಲಾಗುತ್ತಿದೆ, ಯಾವ ದಾಖಲೆಗಳನ್ನು ಹಾಜರು ಪಡಿಸಬೇಕು, ವಿಚಾರಣೆಯ ದಿನಾಂಕ, ಸ್ಥಳ ಹಾಗೂ ಸಮಯವನ್ನು ಮುದ್ರಿಸಲಾಗಿರುತ್ತದೆ. ಬಿಎಲ್ಒ ಗಳು ನೋಟಿಸ್ ಅನ್ನು ಮತದಾರರ ಮನೆಗೆ ಬಂದು ನೀಡುತ್ತಾರೆ. ಒಂದು ವೇಳೆ ಬಿಎಲ್ಒ ಮನೆಗೆ ಬರುವ ಸಂದರ್ಭದಲ್ಲಿ ಮತದಾರರು ಲಭ್ಯವಿಲ್ಲದೆ ಹೋದರೆ, ಮತದಾರರು ಸೂಚಿಸುವಂತಹ ವ್ಯಕ್ತಿಗೆ ನೋಟಿಸ್ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.
ಕನಿಷ್ಠ 7 ದಿನ ಕಾಲಾವಕಾಶ:
ನೋಟಿಸ್ ನೀಡಿದ ಬಳಿಕ ಮತದಾರರಿಗೆ ಕನಿಷ್ಠ 7 ದಿನಗಳ ಕಾಲಾವಕಾಶ ನೀಡಬೇಕು. ಒಂದು ವೇಳೆ ಮತದಾರರ ನೋಂದಣಾಧಿಕಾರಿ ನೋಟಿಸ್ ನಲ್ಲಿ ತಿಳಿಸಿರುವ ದಿನಾಂಕದಂದು ಹಾಜರಾಗಲು ಮತದಾರರಿಗೆ ಸಾಧ್ಯವಾಗದೆ ಇದ್ದಲ್ಲಿ, ಒಮ್ಮೆ ಮಾತ್ರ ಕಾಲಾವಕಾಶ ಪಡೆಯಲು ಅವಕಾಶವಿರುತ್ತದೆ. ಮತದಾರರ ನೋಂದಣಾಧಿಕಾರಿ ಎದುರು ಸಂಬಂಧಪಟ್ಟ ಮತದಾರರು ಖುದ್ದು ಹಾಜರಾಗಬೇಕು. ಇದಕ್ಕೆ ಯಾವುದೆ ವಿನಾಯಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೇಲ್ಮನವಿಗೆ ಅವಕಾಶ:
ಮತದಾರರಿಗೆ ಅನುಕೂಲ ಕಲ್ಪಿಸಲು ಇಆರ್ಒ ಅಥವಾ ಎಇಆರ್ಒಗಳು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯ, ನಗರ ಪ್ರದೇಶಗಳಲ್ಲಿ ವಾರ್ಡ್ ಕಚೇರಿಗಳಲ್ಲೆ ನೋಟಿಸ್ಗಳ ವಿಚಾರಣೆ ನಡೆಸಲಿದ್ದಾರೆ. ಇಆರ್ಒ ಅಥವಾ ಎಇಆರ್ಒ ಕೈಗೊಳ್ಳುವ ತೀರ್ಮಾನ ಸಮಾಧಾನಕರವಾಗಿರದಿದ್ದರೆ ಮತದಾರರು, ಜಿಲ್ಲಾ ಚುನಾವಣಾಧಿಕಾರಿಗೆ 15 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು, ಜಿಲ್ಲಾ ಚನಾವಣಾಧಿಕಾರಿಯ ತೀರ್ಮಾನ ಸಮಾಧಾನಕರವಾಗಿರದಿದ್ದರೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಅವರು ನುಡಿದರು.
ವಿಶೇಷ ಅಭಿಯಾನ: ಎಎಸ್ಡಿಡಿಒ ಪಟ್ಟಿಯಲ್ಲಿ ಪತ್ತೆಯಾಗದ ಹಾಗೂ ಶಾಶ್ವತ ಸ್ಥಳಾಂತರಗೊಂಡಿರುವ ಮತದಾರರ ಪ್ರಮಾಣ ಹೆಚ್ಚಳ ಇರುವ ಕಡೆ ವಿಶೇಷ ಅಭಿಯಾನ ನಡೆಸುವಂತೆ ಸಂಬಂಧಫಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ತಿಳಿಸಲಾಗಿದೆ. ಈ ವಿಶೇಷ ಅಭಿಯಾನದ ದಿನಾಂಕಗಳನ್ನು ಭಾರತ ಚುನಾವಣಾ ಆಯೋಗದ ವತಿಯಿಂದ ತಿಳಿಸಲಾಗುವುದು. ಈ ಅವಧಿಯಲ್ಲಿ ಯಾವೊಬ್ಬ ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಎಚ್ಚರ ವಹಿಸಲಾಗುವುದು ಎಂದು ಅನ್ಬುಕುಮಾರ್ ತಿಳಿಸಿದರು.
4.46 ಕೋಟಿ ಮತದಾರರು:
4,46,35,975 ಮತದಾರರ ಪೈಕಿ ಪುರುಷ ಮತದಾರರು 2,21,59,240, ಮಹಿಳಾ ಮತದಾರರು 2,24,73,864, ಇತರೆ ಮತದಾರರು 2,871 ಮಂದಿಯಿದ್ದಾರೆ. ಇದರಲ್ಲಿ 18-19 ವರ್ಷದ ಮತದಾರರು 3,70,341, 20-29 ವರ್ಷದ 83,87,880, ವಿಕಲಚೇತನ ಮತದಾರರು 5,55,691, 85 ವರ್ಷಕ್ಕಿಂತ ಹೆಚ್ಚು ವಯೋಮಾನದ 3,92,302, ಎನ್ಆರ್ಐ ಮತದಾರರು 951 ಹಾಗೂ ಸೇವಾ ಮತದಾರರು 44,176 ಮಂದಿ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮತದಾರರ ವಯೋಮಿತಿ
18-19 ವರ್ಷದ 3,70,341
20-29 ವರ್ಷದ 83,87,880
30-39 ವರ್ಷದ 1,01,59,639
40-49 ವರ್ಷದ 93,49,776
50-59 ವರ್ಷದ 75,80,942
60-69 ವರ್ಷದ 50,64,294
70-79 ವರ್ಷದ 27,32,472
80-89 ವರ್ಷದ 8,44,044
90 ವರ್ಷಕ್ಕಿಂತ ಮೇಲ್ಪಟವರು 1,46,220
ಮತಗಟ್ಟೆಗಳ ಸಂಖ್ಯೆ ಹೆಚ್ಚಳ
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗುವ ಮುನ್ನ ಪ್ರಸಕ್ತ ಸಾಲಿನ ಜೂ.16ರಂತೆ ನಗರ ಪ್ರದೇಶದಲ್ಲಿ 21,520, ಗ್ರಾಮೀಣ ಪ್ರದೇಶದಲ್ಲಿ 37,530 ಮತಗಟ್ಟೆಗಳಂತೆ 41,498 ಕಡೆ ಒಟ್ಟು 59,050 ಮತಗಟ್ಟೆಗಳಿದ್ದವು. ಕೇಂದ್ರ ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1200 ಮತದಾರರಿಗೆ ಸೀಮಿತಗೊಳಿಸಿರುವುದರಿಂದ, ಇದೀಗ ಮತಗಟ್ಟೆಗಳನ್ನು ತರ್ಕಬದ್ಧಗೊಳಿಸಿದ ಬಳಿಕ ನಗರ ಪ್ರದೇಶದಲ್ಲಿ 21,862, ಗ್ರಾಮೀಣ ಪ್ರದೇಶದಲ್ಲಿ 39,061 ಮತಗಟ್ಟೆಗಳಂತೆ 41,888 ಕಡೆ ಒಟ್ಟು 60,923 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 1873 ಮತಗಟ್ಟೆಗಳು ಹೆಚ್ಚಳವಾಗಿವೆ.
ನಿಮ್ಮ ಹೆಸರು ಇಲ್ಲಿ ಹುಡುಕಿ
ರಾಜ್ಯ ಮುಖ್ಯ ಚುನಾವಣಾಧಿಕಾರಿಯ ವೆಬ್ಸೈಟ್ https://ceo.karnataka.gov.in, ಭಾರತ ಚುನಾವಣಾ ಆಯೋಗದ ಮೊಬೈಲ್ ಆ್ಯಪ್ ECINET ಹಾಗೂ ನಾಗರಿಕ ಸೇವಾ ಪೋರ್ಟಲ್ https://voters.eci.gov.in ಇಲ್ಲಿ ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ನೋಡಬಹುದಾಗಿದೆ. ಮತದಾರರ ವಿವರಗಳಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಬದಲಾವಣೆ ಮಾಡಬೇಕಿದ್ದಲ್ಲಿ ಮತದಾರರು ಅರ್ಜಿ ನಮೂನೆ 8 ಸಲ್ಲಿಸುವ ಮೂಲಕ ಮಾಹಿತಿ ಸರಿಪಡಿಸಿಕೊಳ್ಳಬಹುದು. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸೆ.23ರೊಳಗಾಗಿ ಹೊಸದಾಗಿ ಅರ್ಜಿ ನಮೂನೆ 6 ಸಲ್ಲಿಸಿದರೆ ದಾಖಲಾತಿ ಪರಿಶೀಲಿಸಿ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರಣಾಂತರಗಳಿಂದ ಎನ್ಯುಮರೇಷನ್ ಫಾರಂ ಸಲ್ಲಿಕೆ ಮಾಡಲು ಸಾಧ್ಯವಾಗದವರು ಸಹ ವಯಸ್ಸು, ವಿಳಾಸ ದೃಢೀಕರಣದ ದಾಖಲೆಗಳು ಹಾಗೂ ಸ್ವಯಂ ಘೋಷಣ ಪತ್ರದ ಜೊತೆಗೆ ಅರ್ಜಿ ನಮೂನೆ 6 ಸಲ್ಲಿಸಬಹುದಾಗಿದೆ.
ಅತೀ ಹೆಚ್ಚು-ಅತೀ ಕಡಿಮೆ ನೋಟಿಸ್ ಪಡೆಯುವ ಜಿಲ್ಲೆಗಳು
ಅತೀ ಹೆಚ್ಚು: ಬೆಂಗಳೂರು ನಗರ-9,46,037, ಬಿಬಿಎಂಪಿ ಉತ್ತರ-6,13,004, ಬಿಬಿಎಂಪಿ ಕೇಂದ್ರ-4,29,372, ಬಿಬಿಎಂಪಿ ದಕ್ಷಿಣ-4,17,631, ಮಂಡ್ಯ-1,50,269, ದಕ್ಷಿಣ ಕನ್ನಡ-1,50,155, ಕೋಲಾರ-1,42,197, ಮೈಸೂರು-1,28,138, ತುಮಕೂರು-1,11,887.
ಅತೀ ಕಡಿಮೆ: ದಾವಣಗೆರೆ-7,088, ಚಾಮರಾಜನಗರ-7,480
ಅನರ್ಹ ಮತದಾರರು ಯಾರು?
• ಭಾರತೀಯ ಪೌರತ್ವ ಹೊಂದಿರದವರು(ವಿದೇಶಿ ಪ್ರಜೆ)
• 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
• ಮತದಾರನಾಗಿ ನೋಂದಾಯಿಸಿಕೊಳ್ಳಲು ಬಯಸುವ ಕ್ಷೇತ್ರದ ನಿವಾಸಿಯಾಗಿರದವರು
• ಸಂವಿಧಾನ ಅಥವಾ ಸಂಬಂಧಪಟ್ಟ ಕಾನೂನಿನಡಿ ನಿವಾಸದ ಅರ್ಹತೆ ಇಲ್ಲದಿರುವುದು
• ಮಾನಸಿಕ ಅಸ್ವಸ್ಥತೆ ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟವರು
• ಅಪರಾಧ, ಭ್ರಷ್ಟ, ಅಕ್ರಮ ಚುನಾವಣಾ ಚಟುವಟಿಕೆಗಳ ಆಧಾರದ ಮೇಲೆ ಅನರ್ಹಗೊಂಡವರು.
• ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡವರು.






