Karnataka SIR | ‘ವ್ಯತ್ಯಾಸಗಳ ಪಟ್ಟಿ’ಯಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಕುಟುಂಬ
ನಟ ಶಿವರಾಜ್ಕುಮಾರ್, ಝೆರೋಧಾ ಸಹಸ್ಥಾಪಕ ನಿಖಿಲ್ ಕಾಮತ್ ಹೆಸರೂ ಪಟ್ಟಿಯಲ್ಲಿ!

ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬದ ಹೆಸರು ಚುನಾವಣಾ ಆಯೋಗದ ‘ವ್ಯತ್ಯಾಸಗಳ ಪಟ್ಟಿ’ಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಸುದ್ದಿಸಂಸ್ಥೆಯ ವರದಿಯ ಪ್ರಕಾರ ನಿಲೇಕಣಿ, ಅವರ ಪತ್ನಿ ರೋಹಿಣಿ ನಿಲೇಕಣಿ ಹಾಗೂ ಮಕ್ಕಳಾದ ಜಾಹ್ನವಿ ನಂದನ್ ನಿಲೇಕಣಿ ಮತ್ತು ನಿಹಾರ್ ನಿಲೇಕಣಿ ಅವರನ್ನು ‘ಕೊನೆಯ ಎಸ್ಐಆರ್ನೊಂದಿಗೆ ಮ್ಯಾಪ್ ಮಾಡಲಾಗಿಲ್ಲ’ ಎಂದು ವರ್ಗೀಕರಿಸಲಾಗಿದೆ.
2002ರ ಮತದಾರರ ಪಟ್ಟಿಯೊಂದಿಗೆ ಹೆಸರುಗಳನ್ನು ತಾಳೆ ಮಾಡಲು ಅಥವಾ ಜೋಡಿಸಲು ಸಾಧ್ಯವಾಗದ ಮತದಾರರಿಗೆ ಈ ವರ್ಗೀಕರಣ ಅನ್ವಯಿಸುತ್ತದೆ ಎಂದು ವರದಿ ತಿಳಿಸಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ನಿಲೇಕಣಿ ಕುಟುಂಬದ ಹೆಸರಿದ್ದು, ಕೋರಮಂಗಲದ ಮೂರನೇ ಬ್ಲಾಕ್ನಲ್ಲಿರುವ ರೆಡ್ಡಿ ಜನಸಂಘ ಪ್ರೌಢಶಾಲೆಯಲ್ಲಿ ಈ ಕುಟುಂಬ ಮತ ಚಲಾಯಿಸುತ್ತದೆ.
ದಾಖಲೆಗಳ ಪರಿಷ್ಕರಣೆ ಹಂತದಲ್ಲಿ ನಿಲೇಕಣಿ ಕುಟುಂಬಕ್ಕೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ. ಅಕ್ಟೋಬರ್ 27ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಚುನಾವಣಾ ಆಯೋಗದಿಂದ ಅನುಮೋದಿಸಲ್ಪಟ್ಟ 11 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಅವರು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ವರದಿಯ ಪ್ರಕಾರ, ಮತದಾರರ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಝೆರೋಧಾದ ಸಹಸ್ಥಾಪಕ ನಿಖಿಲ್ ಕಾಮತ್ ಮತ್ತು ಕನ್ನಡ ನಟ ಶಿವರಾಜ್ಕುಮಾರ್ ಅವರ ಹೆಸರಿಗೂ ನೋಟಿಸ್ಗಳು ಸೃಷ್ಟಿಯಾಗಿವೆ. ಶಿವರಾಜ್ಕುಮಾರ್ ಅವರ ಪ್ರಕರಣದಲ್ಲಿ, ಅವರು ಸ್ವತಃ ಚುನಾವಣಾ ಕಚೇರಿಗೆ ಅಲೆಯುವ ಅಗತ್ಯವಿಲ್ಲದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಮುಖ ಮತದಾರರಿಗಾಗಿ ಇಂತಹ ವಿಶೇಷ ವ್ಯವಸ್ಥೆ ಲಭ್ಯವಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿಐಪಿಗಳ ವಿಚಾರಣೆಯನ್ನು ಅವರು ಕಚೇರಿಗೆ ಬಾರದೇ ಮುಗಿಸಲು ನಮ್ಮಲ್ಲಿ ಅವಕಾಶವಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು Hindustan Times ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಮತದಾರರ ಮನೆ ಬಾಗಿಲಿಗೆ ತೆರಳಿ ಈ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.






