ಕರ್ನಾಟಕ SIR | ʼವಾರ್ತಾಭಾರತಿʼ ವಿಶೇಷ ವರದಿಗೆ ಸಚಿವರಾದ ರಿಝ್ವಾನ್ ಅರ್ಷದ್, ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಪ್ರತಿಕ್ರಿಯೆ
‘ಚುನಾವಣಾ ಆಯೋಗ ಮತ್ತು ಬಿಜೆಪಿಯ ಫ್ರಾಡ್’: ಮನ್ಸೂರ್ ಅಲಿ ಖಾನ್ ಆರೋಪ; ‘ಮತ ಕಡಿತಕ್ಕಾಗಿಯೇ SIR ರೂಪಿಸಲಾಗಿದೆ’: ರಿಝ್ವಾನ್ ಅರ್ಷದ್ ► ‘SIRನಲ್ಲಿ ಸಮಸ್ಯೆಯಿಲ್ಲ, ಅಧಿಕಾರಿಗಳ ಮನಸ್ಥಿತಿಯಲ್ಲಿ ಸಮಸ್ಯೆಯಿದೆ’: ಯು.ಟಿ.ಖಾದರ್

ರಿಝ್ವಾನ್ ಅರ್ಷದ್ | ಯು.ಟಿ. ಖಾದರ್ | ಮನ್ಸೂರ್ ಅಲಿ ಖಾನ್
ಬೆಂಗಳೂರು : ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಮುಸ್ಲಿಂ ಶಾಸಕರು ಪ್ರತಿನಿಧಿಸುವ ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.27.59ರಷ್ಟು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ವಾರ್ತಾಭಾರತಿಯ ವಿಶೇಷ ವರದಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಸಚಿವ ರಿಝ್ವಾನ್ ಅರ್ಷದ್ ಹಾಗೂ ಸಚಿವ ಯು.ಟಿ. ಖಾದರ್ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮನ್ಸೂರ್ ಅಲಿ ಖಾನ್ ಮತ್ತು ರಿಝ್ವಾನ್ ಅರ್ಷದ್ ಅವರು ಮತದಾರರ ಹೆಸರುಗಳ ಕಡಿತದ ಹಿಂದೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ಉದ್ದೇಶಪೂರ್ವಕ ನಡೆ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಯು.ಟಿ. ಖಾದರ್, ಶೇಕಡಾವಾರು ಕಡಿತದ ಬಗ್ಗೆ ಚರ್ಚಿಸುವುದಕ್ಕಿಂತ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ ಎಂದು ಹೇಳಿದ್ದಾರೆ.
ರಾಜಕೀಯ ಸಂಶೋಧನಾ ಸಲಹಾ ಸಂಸ್ಥೆ ‘ಸಂಕಲ್ಪ್’ ಒದಗಿಸಿದ ದತ್ತಾಂಶವನ್ನು ಆಧರಿಸಿ ವಾರ್ತಾಭಾರತಿ ನವೆಂಬರ್ 8ರಂದು ಪ್ರಕಟಿಸಿದ ವಿಶೇಷ ವರದಿಯಲ್ಲಿ, ಮುಸ್ಲಿಂ ಶಾಸಕರು ಪ್ರತಿನಿಧಿಸುವ ಹತ್ತು ಕ್ಷೇತ್ರಗಳ ಒಟ್ಟು ಮತದಾರರಲ್ಲಿ ಶೇ.27.59ರಷ್ಟು ಮಂದಿಯ ಹೆಸರುಗಳನ್ನು SIR ವೇಳೆ ಕೈಬಿಡಲಾಗಿದೆ ಎಂದು ಬಹಿರಂಗಪಡಿಸಲಾಗಿತ್ತು. ರಾಜ್ಯದ ಒಟ್ಟಾರೆ ಮತದಾರರ ಹೆಸರುಗಳ ಕಡಿತದ ಪ್ರಮಾಣ ಶೇ.19.45ರಷ್ಟಿದ್ದರೆ, ಈ ಹತ್ತು ಕ್ಷೇತ್ರಗಳಲ್ಲಿ ಅದು ಗಣನೀಯವಾಗಿ ಹೆಚ್ಚಿರುವುದು ವಿಶ್ಲೇಷಣೆಯಲ್ಲಿ ಕಂಡುಬಂದಿತ್ತು.
2025ರ ಮತದಾರರ ಪಟ್ಟಿಯ ಪ್ರಕಾರ, ಈ ಹತ್ತು ಕ್ಷೇತ್ರಗಳಲ್ಲಿ ಒಟ್ಟು 9,62,359 ಮುಸ್ಲಿಂ ಮತದಾರರಿದ್ದರು. ಅವರಲ್ಲಿ 2,46,759 ಮಂದಿಯ ಹೆಸರುಗಳನ್ನು ಕೈಬಿಡಲಾಗಿದ್ದು, ಇದು ಶೇ.25.64ರಷ್ಟಾಗಿದೆ. ಇದೇ ಕ್ಷೇತ್ರಗಳಲ್ಲಿ ಇತರ ಸಮುದಾಯಗಳ ಮತದಾರರ ಹೆಸರುಗಳ ಕಡಿತದ ಪ್ರಮಾಣ ಶೇ.28.79ರಷ್ಟಿತ್ತು.
ಈ ಅಂಕಿಅಂಶಗಳ ಕುರಿತು ವಾರ್ತಾಭಾರತಿ ವರದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, SIR ಪ್ರಕ್ರಿಯೆಯನ್ನೇ ತೀವ್ರವಾಗಿ ಟೀಕಿಸಿದ್ದಾರೆ.
“ಈ SIR ಪ್ರಕ್ರಿಯೆಯೇ ಚುನಾವಣಾ ಆಯೋಗ ಮತ್ತು ಬಿಜೆಪಿಯ ಒಂದು ಫ್ರಾಡ್ ಎಂದು ಹೇಳಬಹುದು. ಎಲ್ಲಿ ಬಿಜೆಪಿಯ ಮತದಾರರಿಲ್ಲವೋ, ಅಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಡಿಲೀಟ್ ಮಾಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಡವರು ಮತ್ತು ವಯಸ್ಸಾದವರಿಗೆ ಈ ಪ್ರಕ್ರಿಯೆಯಿಂದ ಹೆಚ್ಚು ತೊಂದರೆಯಾಗುತ್ತಿದೆ ಎಂದಿರುವ ಅವರು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಅನುಸರಿಸಿದ ವಿಧಾನವನ್ನೇ ಕರ್ನಾಟಕದಲ್ಲೂ ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಈ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಜ್ಞಾನೇಶ್ ಕುಮಾರ್ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇಷ್ಟೆಲ್ಲ ವಿವಾದಗಳು ನಡೆದರೂ ಮುಖ್ಯ ಚುನಾವಣಾ ಆಯುಕ್ತರು ಒಂದು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರಾ?” ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನಿಸಿದ್ದಾರೆ.
ಮುಸ್ಲಿಂ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡು ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಪಕ್ಷ ಎಂದು ಆರೋಪಿಸಿದ್ದಾರೆ. ಮುಸ್ಲಿಮರು ಸಾಮಾನ್ಯವಾಗಿ ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುತ್ತಾರೆ. ಅವರ ಮತಗಳು ಕಡಿತಗೊಂಡರೆ ಅದರ ರಾಜಕೀಯ ಲಾಭ ಬಿಜೆಪಿಗೆ ದೊರೆಯುತ್ತದೆ ಎಂಬುದು ಅವರ ವಾದವಾಗಿದೆ.
SIR ವಿರುದ್ಧ ಕಾಂಗ್ರೆಸ್ ಹೋರಾಟ ತಣ್ಣಗಾಗಿದೆಯೇ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಅವರು, ದೆಹಲಿ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಹಬ್ಬಗಳ ಹಿನ್ನೆಲೆಯಲ್ಲಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಬಂದಿರಬಹುದಾದರೂ ಹೋರಾಟ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಮತ ಜನರ ಆಸ್ತಿ. ಅದನ್ನು ಕದಿಯಲು ಹೊರಟಾಗ ಜನರೂ ಬೀದಿಗೆ ಬಂದು ವಿರೋಧಿಸಬೇಕು. ಕಾನೂನುಬದ್ಧವಾಗಿಯೂ, ಪ್ರತಿಭಟನೆಗಳ ಮೂಲಕವೂ ಎಲ್ಲ ರೀತಿಯಲ್ಲಿ ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿರುವವರು ತಕ್ಷಣ ತಮ್ಮ ಹೆಸರುಗಳನ್ನು ಪರಿಶೀಲಿಸಬೇಕು. ಹೆಸರು ಇಲ್ಲದಿದ್ದರೆ ಫಾರ್ಮ್ 6 ಸಲ್ಲಿಸಬೇಕು. ಇದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.
ಇದೇ ವಿಷಯದ ಕುರಿತು ವಾರ್ತಾಭಾರತಿಗೆ ಪ್ರತಿಕ್ರಿಯಿಸಿದ ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್, SIR ಪ್ರಕ್ರಿಯೆಯನ್ನು ರೂಪಿಸಿರುವ ಉದ್ದೇಶವೇ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು ಎಂದು ಆರೋಪಿಸಿದ್ದಾರೆ.
“ನೋಡಿ, SIR ಡಿಸೈನ್ ಮಾಡಿರುವುದೇ ಮತವನ್ನು ಕಡಿಮೆ ಮಾಡಬೇಕು ಎಂದು. ಮತ ತೆಗೆಯುವುದಕ್ಕೆ SIR ಮಾಡಿರುವುದು. ಎಲ್ಲರಿಗೂ ಮತದಾನದ ಅಧಿಕಾರ ಕೊಡುವುದಕ್ಕೆ ಮಾಡಿಲ್ಲ. ಇದರಲ್ಲಿ ನಮಗೆ ಯಾವುದೇ ಸಂಶಯ ಇಲ್ಲ” ಎಂದು ಹೇಳಿದ್ದಾರೆ.
ಮುಸ್ಲಿಂ ಶಾಸಕರು ಪ್ರತಿನಿಧಿಸುವ ಹತ್ತು ಕ್ಷೇತ್ರಗಳಲ್ಲಿ ಶೇ.27ಕ್ಕೂ ಹೆಚ್ಚು ಮತದಾರರ ಹೆಸರುಗಳು ಕಡಿತಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳು ಕಡಿತಗೊಂಡಿರುವ ಆರೋಪದ ಕುರಿತು ಕೇಳಿದಾಗ, ಈ ಸಮಸ್ಯೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂದು ರಿಝ್ವಾನ್ ಅರ್ಷದ್ ಹೇಳಿದ್ದಾರೆ.
“ಕೇವಲ ನಮ್ಮ ಸಮುದಾಯ ಮಾತ್ರವಲ್ಲ. ಎಲ್ಲಾ ಸಮುದಾಯಗಳ ತಳಹಂತದಲ್ಲಿರುವ ಜನರ ಮತಗಳು ಕೂಡ ಕಡಿತಗೊಂಡಿವೆ. ಎಲ್ಲರ ಪರವಾಗಿ ನಾವು ಹೋರಾಟ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳಲು ಬಯಸುವ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಹೋರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿಯವರ ಕರೆಗೆ ಕಾಯುತ್ತಿದ್ದೇವೆ. ಕರೆ ಬಂದ ತಕ್ಷಣ ಮತ್ತೊಂದು ಸುತ್ತಿನ ಹೋರಾಟ ಪ್ರಾರಂಭವಾಗುತ್ತದೆ. ಯಾರೊಬ್ಬರೂ ಮತದಾನದ ಹಕ್ಕಿನಿಂದ ವಂಚಿತರಾಗಲು ಬಿಡುವುದಿಲ್ಲ” ಎಂದು ರಿಝ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ವಾರ್ತಾಭಾರತಿಯ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್, ಶೇಕಡಾವಾರು ಮತ ಕಡಿತದ ಅಂಕಿಅಂಶಗಳಿಗಿಂತ ವಾಸ್ತವವಾಗಿ ಎಷ್ಟು ಮಂದಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕಾಗಿದೆ ಎಂದು ಹೇಳಿದ್ದಾರೆ.
“ಎಷ್ಟು ಪರ್ಸೆಂಟ್ ಮತ ಕಟ್ ಆಗಿದೆ ಎನ್ನುವುದಕ್ಕಿಂತ ನಮ್ಮ ಕ್ಷೇತ್ರದಲ್ಲಿ ಯಾರಾದರೂ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರಾ ಎಂಬುದನ್ನು ನೋಡಬೇಕು. ಈಗ ಕರಡು ಪಟ್ಟಿ ಬಂದಿದೆ. ಬೂತ್ ಮಟ್ಟದಲ್ಲಿ, ಮನೆಮನೆಗೆ ಹೋಗಿ ಪರಿಶೀಲನೆ ಮಾಡಬೇಕು” ಎಂದು ಹೇಳಿದ್ದಾರೆ.
ತಮ್ಮ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರಿತು ವಿವರ ನೀಡಿದ ಖಾದರ್, ಗೈರುಹಾಜರಿ, ಮೃತಪಟ್ಟವರು ಮತ್ತು ಸ್ಥಳಾಂತರಗೊಂಡ ಮತದಾರರನ್ನು ಹೊರತುಪಡಿಸಿದರೆ ಸುಮಾರು ಒಂದು ಸಾವಿರ ಮತಗಳಷ್ಟೇ ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ.
ಬೂತ್ ಮುಖಂಡರು ಮನೆಮನೆಗೆ ತೆರಳಿ ಹೆಸರುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಮತ್ತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯ ವೆಬ್ಸೈಟ್ನಲ್ಲಿ ಮತದಾರರ ಕರಡು ಪಟ್ಟಿ ಲಭ್ಯವಿದೆ. ಸಾರ್ವಜನಿಕರು ತಮ್ಮ ಕ್ಷೇತ್ರ ಹಾಗೂ ಸಂಬಂಧಪಟ್ಟ ವಿವರಗಳನ್ನು ಬಳಸಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
“ಗಾಳಿಯಲ್ಲಿ ಹುಡುಕಿದರೆ ಏನೂ ಸಿಗುವುದಿಲ್ಲ. ಪ್ರಾಯೋಗಿಕವಾಗಿ ಕೆಲಸ ಮಾಡಬೇಕು” ಎಂದು ಹೇಳಿರುವ ಖಾದರ್, 18 ವರ್ಷ ತುಂಬಿದ ಯುವಜನರು ಫಾರ್ಮ್ 6 ಮೂಲಕ ಮತದಾರರ ಪಟ್ಟಿಗೆ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪದ ಕುರಿತು ಮಾತನಾಡಿದ ಖಾದರ್, ಈ ಹಿಂದೆ ಚುನಾವಣಾ ಆಯೋಗದ ಕಚೇರಿ ಎದುರು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದನ್ನು ನೆನಪಿಸಿದ್ದಾರೆ. ಬಡವರು, ಶೋಷಿತರು ಹಾಗೂ ಅಲ್ಪಸಂಖ್ಯಾತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ತಡೆಯಲು ಆ ಪ್ರತಿಭಟನೆ ನೆರವಾಯಿತು ಎಂದು ಹೇಳಿದ್ದಾರೆ.
ಆದರೆ SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿರೋಧಿಸುವ ಬದಲು ಅದನ್ನು ಜಾರಿಗೊಳಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಬೇಕು ಎಂಬ ನಿಲುವನ್ನು ಖಾದರ್ ವ್ಯಕ್ತಪಡಿಸಿದ್ದಾರೆ.
“ಸಮಸ್ಯೆ ಇರುವುದು SIRನಲ್ಲಿ ಅಲ್ಲ. ಅಲ್ಲಿ ಕುಳಿತಿರುವ ಅಧಿಕಾರಿಗಳ ಮನಸ್ಥಿತಿಯಲ್ಲಿ. ಫಾರ್ಮ್ 7ರಲ್ಲಿ ಒಂದೇ ರೀತಿಯ ಪ್ರಿಂಟರ್ನಲ್ಲಿ ವಿವರಗಳನ್ನು ತುಂಬಿ ಕೊಟ್ಟಿದ್ದು ಯಾರು? ಮಾಹಿತಿ ಸೋರಿಕೆ ಮಾಡಿದ್ದು ಯಾರು? ಇದನ್ನು ತನಿಖೆ ಮಾಡಿ ಎಫ್ಐಆರ್ ದಾಖಲಿಸಬೇಕು ಎಂದು ನಾವು ಪ್ರತಿಭಟಿಸಿದ್ದೆವು” ಎಂದು ಹೇಳಿದ್ದಾರೆ.
ವಾರ್ತಾಭಾರತಿ ಪ್ರಕಟಿಸಿರುವ ವಿಶ್ಲೇಷಣೆಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಕಾರಣಗಳಲ್ಲಿಯೂ ಗಮನಾರ್ಹ ವ್ಯತ್ಯಾಸಗಳು ಕಂಡುಬಂದಿದ್ದವು. ರಾಜ್ಯದ ಮೂಲ ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಪಾಲು ಶೇ.12.9ರಷ್ಟಿದ್ದರೆ, ‘ಗೈರು’ ಎಂದು ಗುರುತಿಸಿ ಕೈಬಿಡಲಾದ ಮತದಾರರಲ್ಲಿ ಶೇ.17.1ರಷ್ಟು ಮತ್ತು ‘ಈಗಾಗಲೇ ನೋಂದಾಯಿತ’ ಎಂಬ ಕಾರಣದಿಂದ ಕೈಬಿಡಲಾದವರಲ್ಲಿ ಶೇ.20.3ರಷ್ಟು ಮುಸ್ಲಿಮರಾಗಿದ್ದರು. ಇಂತಹ ಅಳಿಸುವಿಕೆಗಳಿಗೆ ಬಳಸಿದ ಪರಿಶೀಲನಾ ವಿಧಾನಗಳ ಬಗ್ಗೆ ವರದಿ ಪ್ರಶ್ನೆಗಳನ್ನು ಎತ್ತಿತ್ತು.
ರಾಜಕೀಯ ಆರೋಪಗಳು ಮತ್ತು ಪ್ರತ್ಯಾರೋಪಗಳ ನಡುವೆಯೇ, ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ನಾಗರಿಕನ ಹೆಸರು ತಪ್ಪಾಗಿ ಕೈಬಿಡದಂತೆ ನೋಡಿಕೊಳ್ಳುವುದು ಈಗ ಪ್ರಮುಖ ಸವಾಲಾಗಿದೆ.






