Karnataka SIR : ಅಳಿಸಿದ್ದ ದತ್ತಾಂಶದಿಂದ ಸುಮಾರು 6,000 ಮತದಾರರು ನಾಪತ್ತೆಯಾಗಿರುವುದು ಬಹಿರಂಗ; ವರದಿ

ಬೆಂಗಳೂರು,ಸೆ.26: ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನಕ್ಕೆ ಸಂಬಂಧಿಸಿದಂತೆ ಹಂಚಿಕೊಂಡಿರುವ ದತ್ತಾಂಶದಂತೆ, ಮತದಾರರ ಪಟ್ಟಿಯಿಂದ ಹೆಸರುಗಳ ಅಳಿಸುವಿಕೆಯ ಅಂಕಿ-ಅಂಶಗಳಲ್ಲಿ ಸುಮಾರು 6,000 ಮತದಾರರ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ ಎಂದು newindianexpress.com ವರದಿ ಮಾಡಿದೆ.
ಶನಿವಾರ ಬಿಡುಗಡೆಯಾದ ಆ.24, 2026ರ ಅಂತಿಮ ಎಸ್‌ಐಆರ್ ಕರಡು ಮತದಾರರ ಪಟ್ಟಿಯ ಪ್ರಕಾರ, ಚುನಾವಣಾಧಿಕಾರಿಗಳು ಜೂ.16ರಿಂದ ಆ.23ರ ನಡುವೆ ಹೆಸರುಗಳನ್ನು ಅಳಿಸಲು ಒಟ್ಟು 67,307 ಫಾರ್ಮ್-7 ಅರ್ಜಿಗಳನ್ನು ಸ್ವೀಕರಿಸಿದ್ದರು. ಆದರೆ ಸೆ. 25ರಂದು ಸಿಇಒ ಕಚೇರಿ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಹೆಸರುಗಳ ಅಳಿಸುವಿಕೆಗಾಗಿ 61,130 ಅರ್ಜಿಗಳನ್ನು ಸ್ವೀಕರಿಸಿ ಸಂಸ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.
ಅರ್ಜಿಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಈ ವ್ಯತ್ಯಾಸವು ಚುನಾವಣಾ ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ. ಈ ದೋಷವನ್ನು ಒಪ್ಪಿಕೊಂಡಿರುವ ಅವರು, ಸಿಇಒ ಕರ್ನಾಟಕ ಮತ್ತು ಭಾರತೀಯ ಚುನಾವಣಾ ಆಯೋಗದ ಸರ್ವರ್ ಮೂಲಕ ಇದನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಅವರು ಈ ವಿಷಯದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಚುನಾವಣಾಧಿಕಾರಿಗಳು ಜೂ.6 ರಿಂದ ಸೆ.24ರವರೆಗೆ ಒಟ್ಟು 19,48,164 ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಸೇರ್ಪಡೆಗಾಗಿ 7,70,988 ಫಾರ್ಮ್-6, ಎನ್‌ಆರ್‌ಐ ಮತದಾರರಿಂದ 4,551 ಫಾರ್ಮ್-6ಎ ಹಾಗೂ ತಿದ್ದುಪಡಿಗಾಗಿ 11,11,495 ಫಾರ್ಮ್-8 ಅರ್ಜಿಗಳು ಸೇರಿವೆ. ಬೀದರ್‌ನಲ್ಲಿ ಅತಿ ಹೆಚ್ಚು ಅಂದರೆ 5,154, ಶಿವಮೊಗ್ಗದಲ್ಲಿ 3,181, ತುಮಕೂರಿನಲ್ಲಿ 3,171 ಮತ್ತು ಬೆಂಗಳೂರು ನಗರದಲ್ಲಿ 2,318 ಮತದಾರರ ಹೆಸರುಗಳನ್ನು ಅಳಿಸಲಾಗಿದೆ.
ಆದರೆ ಕರಡು ಪಟ್ಟಿಯ ಪ್ರಕಾರ, ಜೂ.16ರಿಂದ ಆ.23ರವರೆಗೆ ಚುನಾವಣಾಧಿಕಾರಿಗಳು ಒಟ್ಟು 14,67,929 ಅರ್ಜಿಗಳನ್ನು ಸ್ವೀಕರಿಸಿದ್ದರು. ಇದರಲ್ಲಿ 4,73,354 ಫಾರ್ಮ್-6, 3,880 ಫಾರ್ಮ್-6ಎ, 67,307 ಫಾರ್ಮ್-7 ಮತ್ತು 9,23,388 ಫಾರ್ಮ್-8 ಸೇರಿದ್ದವು.
ಮತದಾರ ಮೃತಪಟ್ಟಿದ್ದರೆ, ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ ಅಥವಾ ನಕಲಿ ನೋಂದಣಿಯಂತಹ ಸಂದರ್ಭಗಳಲ್ಲಿ ಹೆಸರು ಅಳಿಸಲು ಫಾರ್ಮ್-7 ಅನ್ನು ಬಳಸಲಾಗುತ್ತದೆ.
ಫಾರ್ಮ್ 7ನ್ನು ವರ್ಷವಿಡೀ ಸಲ್ಲಿಸಬಹುದಾದದರೂ,ಎಸ್‌ಐಆರ್ ಅವಧಿಯಲ್ಲಿ ಅದನ್ನು ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗಾಗಿ ಬಳಸಲಾಗುತ್ತಿದೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆಯು ಅಕ್ಟೋಬರ್ 22ರವರೆಗೆ ಮುಂದುವರಿಯಲಿದ್ದು, ಅಂತಿಮ ಪಟ್ಟಿಯು ಅಕ್ಟೋಬರ್ 27ರಂದು ಪ್ರಕಟವಾಗಲಿದೆ.
ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ ಒಟ್ಟು ಫಾರ್ಮ್-7 ಹಾಗೂ ಫಾರ್ಮ್-8 ಅರ್ಜಿಗಳ ವರ್ಗವಾರು ವಿವರಗಳನ್ನು ಒದಗಿಸಲು ಸಹ ವಿಫಲರಾಗಿದ್ದಾರೆ.






