Karnataka SIR | ಅಂತಿಮ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಮತದಾರರು, 99.32 ಲಕ್ಷ ಮತದಾರರ ಹೆಸರು ಡಿಲೀಟ್ : ಮುಖ್ಯ ಚುನಾವಣಾಧಿಕಾರಿ
► ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ► ಎಸ್‍ಐಆರ್‌ಗೆ 110 ಕೋಟಿ ರೂ.ಗೂ ಹೆಚ್ಚು ವೆಚ್ಚ

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಬಳಿಕ ಭಾರತ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಿದ್ದು, ರಾಜ್ಯದಲ್ಲಿ 4,55,00,011 ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ, ಎಸ್‍ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿದ್ದ 99,32,303 ಹೆಸರುಗಳನ್ನು ಕೈ ಬಿಡಲಾಗಿದೆ.
ಮಂಗಳವಾರ ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಎಸ್‍ಐಆರ್ ಬಳಿಕ ರಾಜ್ಯದಲ್ಲಿ 4,55,00,011 ಮತದಾರರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿದೆ. ಈ ಪೈಕಿ ಪುರುಷ ಮತದಾರರು 2,25,83,107, ಮಹಿಳಾ ಮತದಾರರು 2,29,14,063, ಇತರೆ ಮತದಾರರು 2,841, ವಿಕಲಚೇತನ ಮತದಾರರು 5,65,340, 85 ವರ್ಷ ಮೇಲ್ಪಟ್ಟವರು 3,92,134, ಅನಿವಾಸಿ ಭಾರತೀಯ ಮತದಾರರು 3,252, ಸೇವಾ ಮತದಾರರು 44,322 ಮಂದಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನ ಜೂ.16ರಂದು ಅನ್ವಯಿಸುವಂತೆ 5,54,32,314 ಮತದಾರರಿದ್ದರು.
ಈ ಪೈಕಿ ಗಣತಿ ನಮೂನೆ(ಎನ್ಯುಮರೇಷನ್ ಫಾರಂ)ಗಳನ್ನು ಭರ್ತಿ ಮಾಡಿ ಬಿಎಲ್‍ಒಗಳಿಗೆ ನೀಡಿರುವ 4,46,35,975(ಶೇ.80.52) ಮತದಾರರ ಹೆಸರುಗಳು ಆ.24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಇನ್ನುಳಿದ 1,07,96,339 (ಶೇ.19.48) ಮತದಾರರ ಹೆಸರುಗಳನ್ನು ಎಎಸ್‍ಡಿಡಿಒ(ಗೈರು, ಸ್ಥಳಾಂತರ, ಮೃತರು, ನಕಲಿ ಮತ್ತು ಇತರೆ) ವರ್ಗದಡಿ ಕೈ ಬಿಡಲಾಗಿತ್ತು ಎಂದು ಅವರು ಹೇಳಿದರು.
ಜೂ.16 ರಿಂದ ಅ.26ರವರೆಗೆ ಫಾರಂ-6(ಹೊಸ ಸೇರ್ಪಡೆ), ಫಾರಂ-6ಎ(ಅನಿವಾಸಿ ಭಾರತೀಯ ಮತದಾರರು), ಫಾರಂ-7(ಅಳಿಸುವಿಕೆ/ಆಕ್ಷೇಪಣೆ) ಹಾಗೂ ಫಾರಂ 8(ತಿದ್ದುಪಡಿ) ಅಡಿಯಲ್ಲಿ ಒಟ್ಟು 26,23,875 ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ 20,64,728 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ಇನ್ನುಳಿದಂತೆ, 3,03,483 ಅರ್ಜಿಗಳು ತಿರಸ್ಕೃತಗೊಂಡಿದ್ದು, 2,55,664 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಅನ್ಬುಕುಮಾರ್ ತಿಳಿಸಿದರು.
ಹೊಸ ಮತದಾರರ ಹೆಸರು ಸೇರ್ಪಡೆಗೆ ಸಂಬಂಧಿಸಿದ ನಮೂನೆ-6ರಡಿ 10,62,336 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 8,41,615 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 83,806 ಅರ್ಜಿಗಳು ತಿರಸ್ಕೃತಗೊಂಡಿದ್ದು, 1,36,915 ಅರ್ಜಿಗಳು ಬಾಕಿ ಉಳಿದಿವೆ. ಅನಿವಾಸಿ ಭಾರತೀಯ ಮತದಾರರಿಗೆ ಸಂಬಂಧಿಸಿದ ನಮೂನೆ-6ಎ ಅಡಿ 4,872 ಅರ್ಜಿಗಳು ಬಂದಿವೆ. ಅವುಗಳಲ್ಲಿ 2,267 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದು, 2,198 ಅರ್ಜಿಗಳು ತಿರಸ್ಕೃತಗೊಂಡಿವೆ. 407 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದರು.
ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸಂಬಂಧಿಸಿದ ನಮೂನೆ-7ರಡಿ 2,29,235 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 1,89,293 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 35,309 ಅರ್ಜಿಗಳು ತಿರಸ್ಕೃತಗೊಂಡಿದ್ದು, 4,633 ಅರ್ಜಿಗಳು ಬಾಕಿ ಉಳಿದಿವೆ. ನಮೂನೆ-7ರಡಿ ಯಾರಿಂದಲೂ ಸಗಟು ರೂಪದಲ್ಲಿ ಅರ್ಜಿಗಳನ್ನು ಸ್ವೀಕರಿಸಿಲ್ಲ. ಮತದಾರರ ನೋಂದಣಾಧಿಕಾರಿ ಮೂಲಕ ಆದೇಶಿಸಲ್ಪಟ್ಟ ಬಳಿಕವಷ್ಟೇ ನಮೂನೆ-7 ಸಿದ್ಧಪಡಿಸಿ, ಸಂಬಂಧಪಟ್ಟ ಮತದಾರರಿಗೆ ನೀಡಿ, ವಿವರಣೆ ಕೇಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಮೂನೆ-8ರಡಿ 13,27,432 ಅರ್ಜಿಗಳು ಸ್ವೀಕೃತವಾಗಿದ್ದು, 10,31,553 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 1,82,170 ಅರ್ಜಿಗಳು ತಿರಸ್ಕೃತಗೊಂಡಿದ್ದು, 1,13,709 ಅರ್ಜಿಗಳು ಬಾಕಿ ಇವೆ. ಕರಡು ಮತದಾರರ ಪಟ್ಟಿಯಲ್ಲಿದ್ದ 4,46,35,975 ಮತದಾರರ ಪೈಕಿ 43,82,824 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆಯನ್ನು ನಡೆಸಲಾಯಿತು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಕರಡು ಪಟ್ಟಿ ಬಳಿಕ 1.88 ಲಕ್ಷ ಮತದಾರರ ಹೆಸರುಗಳು ಡಿಲೀಟ್
ಶಾಶ್ವತ ಸ್ಥಳಾಂತರ(ಸ್ವಯಂಚಾಲಿತ ನಮೂನೆ-7 ಸಿದ್ಧ)-1,24,327
ವಿಚಾರಣೆ ಸಂದರ್ಭದಲ್ಲಿ ಅನರ್ಹ ಪ್ರಕರಣಗಳು-61,960
ಮೃತ ಮತದಾರರು-1,091
ಗೈರು ಹಾಜರಿ-184
ನಕಲಿ ನೋಂದಣಿ ಪ್ರಕರಣ-762.
ಒಟ್ಟು: 1,88,324 ಹೆಸರುಗಳು ಕರಡು ಮತದಾರರ ಪಟ್ಟಿ ಬಳಿಕ ಕೈ ಬಿಡಲಾಗಿದೆ.
ಎಸ್‍ಐಆರ್ ಗೆ 110 ಕೋಟಿ ರೂ.ಗೂ ಹೆಚ್ಚು ವೆಚ್ಚ; 14 ಅಧಿಕಾರಿಗಳ ಸಾವು
ರಾಜ್ಯದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ 110 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಿದೆ. ಈ ಪೈಕಿ ಜಾಹೀರಾತುಗಳಿಗೆ ಹೆಚ್ಚಿನ ಹಣ ಖರ್ಚಾಗಿದೆ. ಎಸ್‍ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ವಿದೇಶಿಗರ ಸಂಖ್ಯೆಯನ್ನು ಪತ್ತೆಹಚ್ಚಲಾಗಿದ್ದು, ಆ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದೆ. ಪ್ರಕ್ರಿಯೆ ವೇಳೆ ಒಟ್ಟು 14 ಅಧಿಕಾರಿಗಳು ಮೃತಪಟ್ಟಿದ್ದಾರೆ. ಮೃತ ಅಧಿಕಾರಿಗಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರವನ್ನು ಭಾರತೀಯ ಮುಖ್ಯ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ ಎಂದು ಅನ್ಬುಕುಮಾರ್ ಪ್ರತಿಕ್ರಿಯಿಸಿದರು.
ಜಿಲ್ಲಾವಾರು ಅಂತಿಮ ಮತದಾರರ ಪಟ್ಟಿ
ಬೆಳಗಾವಿ-36,35,860, ಬೆಂಗಳೂರು ನಗರ-24,01,939, ಮೈಸೂರು-22,80,067, ತುಮಕೂರು-20,94,762, ಕಲಬುರಗಿ-18,94,144, ವಿಜಯಪುರ-17,08,099, ದಕ್ಷಿಣ ಕನ್ನಡ-16,78,448, ಮಂಡ್ಯ-14,27,462, ರಾಯಚೂರು-14,24,909, ಬಾಗಲಕೋಟೆ-14,13,341, ಹಾಸನ-13,93,908, ಧಾರವಾಡ-13,78,016, ಶಿವಮೊಗ್ಗ-13,54,046, ಬಿಬಿಎಂಪಿ ಉತ್ತರ-13,25,284, ದಾವಣಗೆರೆ-13,20,819 ಚಿತ್ರದುರ್ಗ-13,17,025, ಬೀದರ್-12,46,746, ಹಾವೇರಿ-12,33,294, ಉತ್ತರ ಕನ್ನಡ-11,39,623, ಕೋಲಾರ-11,39,393, ಬಿಬಿಎಂಪಿ ದಕ್ಷಿಣ-11,13,554, ಬಿಬಿಎಂಪಿ ಕೇಂದ್ರ-10,67,374, ಕೊಪ್ಪಳ-10,59,164, ಬಳ್ಳಾರಿ-10,20,264, ಉಡುಪಿ-10,14,143, ವಿಜಯನಗರ-10,08,367, ಚಿಕ್ಕಬಳ್ಳಾಪುರ-9,53,372, ಯಾದಗಿರಿ-8,87,174, ಚಿಕ್ಕಮಗಳೂರು-8,74,462, ರಾಮನಗರ-8,39,039, ಬೆಂಗಳೂರು ಗ್ರಾಮಾಂತರ-8,04,534 ಚಾಮರಾಜನಗರ-8,00,858, ಗದಗ-7,94,567 ಕೊಡಗು-4,11,632.
ನಿಮ್ಮ ಹೆಸರು ಇಲ್ಲಿ ಹುಡುಕಿ :
ರಾಜ್ಯ ಮುಖ್ಯ ಚುನಾವಣಾಧಿಕಾರಿಯ ವೆಬ್‍ಸೈಟ್ https://ceo.karnataka.gov.in , ಭಾರತ ಚುನಾವಣಾ ಆಯೋಗದ ಮೊಬೈಲ್ ಆ್ಯಪ್ ECINET ಹಾಗೂ ನಾಗರಿಕ ಸೇವಾ ಪೋರ್ಟಲ್ https://voters.eci.gov.in ಇಲ್ಲಿ ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ನೋಡಬಹುದಾಗಿದೆ.
ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆಯೂ ಅತ್ಯಂತ ಪಾರದರ್ಶಕವಾಗಿ ಹಾಗೂ ಕಾನೂನು ರೀತಿಯಲ್ಲಿ ನಡೆದಿದೆ. 34 ಜಿಲ್ಲಾ ಮತದಾರರ ನೋಂದಣಾಧಿಕಾರಿಗಳು, 31 ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, 224 ವಿಧಾನಸಭಾ ಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳು, 336 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 3926 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು, 6092 ಬಿಎಲ್‍ಒ ಸೂಪರ್‍ವೈಸರ್‍ಗಳು ಹಾಗೂ 60,923 ಬಿಎಲ್‍ಒಗಳು ಮತ್ತು ರಾಜಕೀಯ ಪಕ್ಷಗಳಿಂದ ನೇಮಕವಾಗಿದ್ದ 1,33,092 ಬಿಎಲ್‍ಎಗಳು, ಸ್ವಯಂ ಸೇವಕರು, ನಾಗರಿಕರ ಸಹಕಾರಕ್ಕೆ ಧನ್ಯವಾದಗಳು. ಅರ್ಹ ಮತದಾರರು ಯಾರೊಬ್ಬರೂ ಕೈ ಬಿಟ್ಟು ಹೋಗಬಾರದು ಎಂಬುದು ನಮ್ಮ ಉದ್ದೇಶ. ಆದುದರಿಂದ, ಯಾರ ಹೆಸರಾದರೂ ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗಿದ್ದರೆ ಅವರು ಅರ್ಜಿ ನಮೂನೆ 6 ಅನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಿದರೆ, ಅದನ್ನು ಪರಿಶೀಲಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು.
ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ
ಮತದಾರರ ವಯೋಮಿತಿ
18-19 ವರ್ಷದ 6,83,364
20-29 ವರ್ಷದ 86,56,838
30-39 ವರ್ಷದ 1,02,57,680
40-49 ವರ್ಷದ 94,17,853
50-59 ವರ್ಷದ 76,15,826
60-69 ವರ್ಷದ 50,87,095
70-79 ವರ್ಷದ 27,45,208
80-84 ವರ್ಷದ 5,99,691
85 ವರ್ಷಕ್ಕಿಂತ ಮೇಲ್ಪಟವರು 3,92,134
ಮತಗಟ್ಟೆಗಳ ಸಂಖ್ಯೆ ಹೆಚ್ಚಳ
ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ಆರಂಭವಾಗುವ ಮುನ್ನ ಪ್ರಸಕ್ತ ಸಾಲಿನ ಜೂ.16ರಂತೆ ನಗರ ಪ್ರದೇಶದಲ್ಲಿ 21,520, ಗ್ರಾಮೀಣ ಪ್ರದೇಶದಲ್ಲಿ 37,530 ಮತಗಟ್ಟೆಗಳಂತೆ 41,498 ಕಡೆ ಒಟ್ಟು 59,050 ಮತಗಟ್ಟೆಗಳಿದ್ದವು. ಕೇಂದ್ರ ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1200 ಮತದಾರರಿಗೆ ಸೀಮಿತಗೊಳಿಸಿರುವುದರಿಂದ, ಇದೀಗ ಮತಗಟ್ಟೆಗಳನ್ನು ತರ್ಕಬದ್ಧಗೊಳಿಸಿದ ಬಳಿಕ ನಗರ ಪ್ರದೇಶದಲ್ಲಿ 21,862, ಗ್ರಾಮೀಣ ಪ್ರದೇಶದಲ್ಲಿ 39,061 ಮತಗಟ್ಟೆಗಳಂತೆ 41,888 ಕಡೆ ಒಟ್ಟು 60,923 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 1873 ಮತಗಟ್ಟೆಗಳು ಹೆಚ್ಚಳವಾಗಿವೆ.






