ಕರ್ನಾಟಕ ಎಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ 2024-26: ಎಸ್ಸಿ, ಎಸ್ಟಿ, ಮುಸ್ಲಿಮರ ತೇರ್ಗಡೆ ಪ್ರಮಾಣ ಅತ್ಯಂತ ಕಡಿಮೆ; ವರದಿ

ಸಾಂದರ್ಭಿಕ ಚಿತ್ರ | PC : Image by jannoon028 on Magnific
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (ಕೆಎಸ್ಇಎಬಿ) 2024-26ರ ಸಮಗ್ರ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಮುಸ್ಲಿಂ ಸಮುದಾಯಗಳು ಶೇಕಡಾವಾರು ಅತ್ಯಂತ ಕಡಿಮೆ ಉತ್ತೀರ್ಣತೆ ಪ್ರಮಾಣವನ್ನು ಹೊಂದಿವೆ ಎಂದು deccanherald.com ವರದಿ ಮಾಡಿದೆ.
ಈ ಅವಧಿಯಲ್ಲಿ ಪಿಯುಸಿ ಪರೀಕ್ಷೆಗಳಲ್ಲಿ ಎಸ್ಸಿ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ (ಶೇ.65.96) ತೇರ್ಗಡೆಯಾಗಿದ್ದು, ನಂತರದ ಸ್ಥಾನಗಳಲ್ಲಿ ಎಸ್ಟಿ (ಶೇ.77.73) ಮತ್ತು ಮುಸ್ಲಿಂ (ಶೇ.78.69) ಸಮುದಾಯಗಳಿವೆ.
ಪ್ರತ್ಯೇಕ ವರ್ಷಗಳನ್ನು ಪರಿಗಣಿಸಿದಾಗಲೂ, ಎಸ್ಸಿ ವಿದ್ಯಾರ್ಥಿಗಳು ಎಲ್ಲ ಮೂರೂ ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ; 2024ರಲ್ಲಿ ಶೇ.72.40, 2025ರಲ್ಲಿ ಶೇ.62.43 ಮತ್ತು 2026ರಲ್ಲಿ ಶೇ.63.07. 2024ರಲ್ಲಿ ಶೇ.72.78, 2025 ರಲ್ಲಿ ಶೇ.80.22 ಮತ್ತು 2026ರಲ್ಲಿ ಶೇ 80.19ರಷ್ಟು ಎಸ್ಟಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.
ಶೇ.78.69ರಷ್ಟು ಉತ್ತೀರ್ಣತೆ ಪ್ರಮಾಣದೊಂದಿಗೆ ಪ್ರವರ್ಗ 2ಬಿ/ಮುಸ್ಲಿಂ ಸಮುದಾಯವು ಎಸ್ಸಿ/ಎಸ್ಟಿಯೇತರ ಸಮುದಾಯಗಳಲ್ಲಿ ಕನಿಷ್ಠ ಸ್ಥಾನದಲ್ಲಿತ್ತು. ಪ್ರವರ್ಗ 1(ಪಿಂಜಾರ, ದರ್ವೇಶ್ ಮುಂತಾದ ಕೆಲವು ಮುಸ್ಲಿಂ ಸಮುದಾಯಗಳು ಸೇರಿದಂತೆ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು) ಶೇ.79.04 ರಷ್ಟು ಉತ್ತೀರ್ಣತೆಯೊಂದಿಗೆ ನಂತರದ ಸ್ಥಾನದಲ್ಲಿತ್ತು
ಒಕ್ಕಲಿಗ ಸಮುದಾಯವನ್ನು ಒಳಗೊಂಡಿರುವ ಪ್ರವರ್ಗ 3ಎಕ್ಕೆ ಸೇರಿದ ಶೇ.88.82ರಷ್ಟು ಮತ್ತು ಲಿಂಗಾಯತ ಸಮುದಾಯವನ್ನು ಒಳಗೊಂಡಿರುವ ಪ್ರವರ್ಗ 3ಬಿಕ್ಕೆ ಸೇರಿದ ಶೇ. 84.17ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇತರೆ/ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಉತ್ತೀರ್ಣತೆ ಪ್ರಮಾಣ ಗರಿಷ್ಠ ಅಂದರೆ ಶೇ.90.71 ರಷ್ಟಿತ್ತು.
ಎಸೆಸ್ಸೆಲ್ಸಿ ಪರೀಕ್ಷೆಗಳಲ್ಲೂ ಎಸ್ಸಿ,ಎಸ್ಟಿ ಮತ್ತು ಮುಸ್ಲಿಂ ಸಮುದಾಯಗಳೇ ಅತ್ಯಂತ ಕಡಿಮೆ ಉತ್ತೀರ್ಣತೆ ಪ್ರಮಾಣ ಹೊಂದಿದ್ದರೂ (2024-26ರವರೆಗೆ) ಅವುಗಳ ಕ್ರಮದಲ್ಲಿ ಬದಲಾವಣೆಯಾಗಿದೆ. ಶೇ.73.46ರಷ್ಟು ಉತ್ತೀರ್ಣತೆ ಪ್ರಮಾಣದೊಂದಿಗೆ ಪ್ರವರ್ಗ 2ಬಿ/ಮುಸ್ಲಿಮರು ಕನಿಷ್ಠ ಸ್ಥಾನದಲ್ಲಿದ್ದರೆ, ಎಸ್ಟಿ (ಶೇ.73.59) ಮತ್ತು ಎಸ್ಸಿ (ಶೇ. 74.16) ಸಮುದಾಯಗಳು ನಂತರದ ಸ್ಥಾನಗಳಲ್ಲಿವೆ. ಶೇ.86.84ರಷ್ಟು ಇತರೆ/ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.
3ಎ ಪ್ರವರ್ಗ ಶೇ.87.02ರಷ್ಟು, 3ಬಿ ಪ್ರವರ್ಗ ಶೇ.84.4 ರಷ್ಟು ಉತ್ತೀರ್ಣತೆ ಪ್ರಮಾಣವನ್ನು ಹೊಂದಿದ್ದವು.
Deccan Herald ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಮಾಜಶಾಸ್ತ್ರಜ್ಞೆ ಪ್ರೊ.ಎ.ಆರ್. ವಾಸವಿ ಅವರು, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. 2024-26ರ ಅಂಕಿಅಂಶಗಳು ಶಿಕ್ಷಣ ಕ್ಷೇತ್ರದ ಖಾಸಗೀಕರಣದ ಪರಿಣಾಮವು ಎಸ್ಸಿ,ಎಸ್ಟಿ ಮತ್ತು ಮುಸ್ಲಿಮರಂತಹ ಅತ್ಯಂತ ಹಿಂದುಳಿದ ಸಮುದಾಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ, ಎಸ್ಐಆರ್ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರ ನಿಯೋಜನೆಯಿಂದಾಗಿ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಶಿಕ್ಷಕರ ಸಂಖ್ಯೆಯೂ ಸಾಕಷ್ಟಿಲ್ಲ. ಸರಕಾರಿ ಶಾಲೆಗಳ ಒಟ್ಟಾರೆ ಆಡಳಿತ ಹಾಗೂ ಕಾರ್ಯನಿರ್ವಹಣೆಯೂ ಕುಸಿದಿದೆ ಎಂದರು.






