ನ್ಯಾಯಾಲಯ ಸೂಚನೆ ಕೊಟ್ಟರೆ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ: ಸಿಎಂ ಸಿದ್ದರಾಮಯ್ಯ
"ಯುಪಿಎಸ್ಸಿ ಮಾದರಿಯಲ್ಲಿ ನೇಮಕಾತಿ ವಿಧಾನ ಅಳವಡಿಕೆಗೆ ಸೂಚನೆ"

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ)ವು ನಡೆಸುವ ನೇಮಕಾತಿ ವಿಧಾನಗಳನ್ನು ಪರಿಶೀಲಿಸಿ, ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ದಲ್ಲಿಯೂ ಅಳವಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗುವುದು. ಅಲ್ಲದೇ, ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ ನಡೆಸಲು ನಾವು ಅಡ್ಡಿಪಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಎಎಸ್ ಪರೀಕ್ಷೆ ಮತ್ತು ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಅನುವಾದದ ಲೋಪಗಳಿಂದ ಹಾಗೂ ಪರೀಕ್ಷೆ, ಸಂದರ್ಶನ ನಡೆದ ಬಳಿಕ ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವ ಕೆಪಿಎಸ್‍ಸಿಯ ವಿಳಂಬ ಧೋರಣೆಯಿಂದಾಗಿ ನಿರುದ್ಯೋಗ ಪದವೀಧರರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಿಯಮ 69ರಡಿ ನಡೆದ ಸಾರ್ವಜನಿಕ ಮಹತ್ವದ ವಿಷಯಕ್ಕೆ ಬುಧವಾರ ವಿಧಾನಸಭೆಯಲ್ಲಿ ಅವರು ಉತ್ತರಿಸಿದರು.
ಕೆಎಎಸ್ ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಕೆಪಿಎಸ್‍ಸಿಗೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರಮುಖವಾಗಿ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಲೋಪದೋಷಗಳಿಗೆ ಕಾರಣರಾದ ವಿಷಯ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ಮೇಲೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗುವುದು ಮುಖ್ಯಮಂತ್ರಿ ತಿಳಿಸಿದರು.
ಆಯೋಗವು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ತಯಾರಿಸಿ, ನಂತರ ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಸೂಚನೆಯನ್ನು ನೀಡಲಾಗುವುದು. ಕೆಪಿಎಸ್‍ಸಿ ಸರಿಯಾಗಬೇಕು ಎಂಬ ಈ ಸದನದ ಕಳಕಳಿ ಸರಿಯಾಗಿದೆ. ನಮ್ಮ ಸರಕಾರದ ಕಳಕಳಿಯೂ ಅದೇ ಆಗಿದೆ. ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಕಳಂಕರಹಿತವಾಗಿರಬೇಕು, ದಕ್ಷರೂ, ಪ್ರಾಮಾಣಿಕರೂ ಆದ ಅಧಿಕಾರಿಗಳು ರಾಜ್ಯದ ಆಡಳಿತ ಸೇವೆಗೆ ಬರಬೇಕು ಎಂಬ ಉದ್ದೇಶ, ಕಳಕಳಿ ನಮ್ಮದೂ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಡಬೇಕು ಎಂಬ ಉದ್ದೇಶದಿಂದ 2013ರ ಜುಲೈನಲ್ಲಿ ನಮ್ಮ ಸರಕಾರವೇ ಪಿ.ಸಿ.ಹೋಟಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿದ್ದ ಬಹುಪಾಲು ಶಿಫಾರಸ್ಸುಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೆವು ಎಂದು ಮುಖ್ಯಮಂತ್ರಿ ಹೇಳಿದರು.
ಹೋಟಾ ಸಮಿತಿಯ ಶಿಫಾರಸ್ಸುಗಳಲ್ಲಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹೊರ ರಾಜ್ಯದವರಾಗಿರಬೇಕು ಎಂಬ ಅಂಶವೂ ಇತ್ತು. ಈ ಅಧಿಕಾರಿಗಳಿಗೆ ಕನ್ನಡದ ಜ್ಞಾನದ ಕೊರತೆಯೂ ಇರುತ್ತದೆ. ಆದರೆ, ಪ್ರಶ್ನೆಗಳನ್ನು ತಯಾರಿಸುವ ಕರ್ನಾಟಕದ ಅಧ್ಯಾಪಕರಿಗೆ ಕನ್ನಡ ಅನುವಾದ ಮಾಡಲಾಗದ ದುಸ್ಥಿತಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂಗ್ಲೀಷಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಲೋಕಸೇವಾ ಆಯೋಗಗಳ ಕುರಿತು ಸರಕಾರಗಳು ನೇರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಇದು ಸಂವಿಧಾನಬದ್ಧವಾದ ಸಂಸ್ಥೆಯಾಗಿದೆ. ಈ ಆಯೋಗಗಳ ಸದಸ್ಯರನ್ನು ತೆಗೆದು ಹಾಕಲು ಸುಪ್ರೀಂಕೋರ್ಟಿನ ಒಪ್ಪಿಗೆಯೊಂದಿಗೆ ರಾಷ್ಟ್ರಪತಿ ತೆಗೆದು ಹಾಕಬೇಕು ಎಂದು ಅವರು ಮಾಹಿತಿ ನೀಡಿದರು.
ಉತ್ತರಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆ ಇದ್ದು, ಅಲ್ಲಿ ಲೋಕಸೇವಾ ಆಯೋಗದಲ್ಲಿ ಕೇವಲ 8 ಜನ ಸದಸ್ಯರಿದ್ದಾರೆ. ನಮ್ಮ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯಿದ್ದು, 16 ಜನ ಸದಸ್ಯರಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ. ಕೆಪಿಎಸ್‍ಸಿಯ ಸದಸ್ಯರ ಸಂಖ್ಯೆ ಅಧ್ಯಕ್ಷರೂ ಸೇರಿದಂತೆ 14 ರಿಂದ 16ಕ್ಕೆ ಏರಿಸಿದ್ದು ಬೊಮ್ಮಾಯಿ ಸರಕಾರ ಎಂದು ಸಿದ್ದರಾಮಯ್ಯ ಹೇಳಿದರು.
384 ಹುದ್ದೆಗಳ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆಯನ್ನು ಆಯೋಗವು ಮೊದಲಿಗೆ 2024ರ ಆ.27ರಂದು ನಡೆಸಿದ್ದು, ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕನ್ನಡ ಭಾಷಾಂತರದಲ್ಲಿನ ಲೋಪದೋಷಗಳು ಉಂಟಾಗಿರುವ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು, ಆಯೋಗವು ವಿಷಯ ತಜ್ಞರ ಸಮಿತಿಗಳನ್ನು ರಚಿಸಿದೆ ಎಂದು ಅವರು ತಿಳಿಸಿದರು.
ನಂತರ, ಡಿ.29ರಂದು ಮರುಪರೀಕ್ಷೆ ನಡೆಸಲಾಯಿತು. ಅದರಲ್ಲೂ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಬಾಷಾಂತರದಲ್ಲಿ ಲೋಪವಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಆಯೋಗವು ವಿಷಯ ತಜ್ಞರ ಸಮಿತಿಗಳನ್ನು ಮತ್ತೊಮ್ಮೆ ರಚಿಸಿತು. ಆ ಸಮಿತಿಯು ಎರಡೂ ಪತ್ರಿಕೆಗಳನ್ನು ಪರಿಶೀಲಿಸಿ, ಒಟ್ಟು 6 ಪ್ರಶ್ನೆಗಳು ತಪ್ಪಾಗಿದ್ದು, ಕೃಪಾಂಕ ನೀಡಬಹುದೆಂದು ಅಭಿಪ್ರಾಯಪಟ್ಟಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈಗಾಗಲೇ ಮುಖ್ಯ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿ, ಆಯೋಗವು ಅಧಿಸೂಚನೆಯನ್ನು ಹೊರಡಿಸಿರುವುದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕೆಎಎಟಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದು ವಿಚಾರಣೆಗೆ ಬಾಕಿ ಇರುವುದರಿಂದ ಈ ಹಂತದಲ್ಲಿ ಸರಕಾರವು ಯಾವುದೇ ನಿರ್ಣಯ ಕೈಗೊಳ್ಳುವುದು ಸೂಕ್ತವಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಆಯೋಗವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು 25 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು ನಡೆಸಿ ಅಂತಿಮ ಆಯ್ಕೆಪಟ್ಟಿಯನ್ನು 2024ರ ಜ.31ರಂದು ಆಯೋಗ ಪ್ರಕಟಿಸಿದೆ. ತಾತ್ಕಾಲಿಕ ಆಯ್ಕೆಪಟ್ಟಿಗೆ ಆನಂದ್ ಎಸ್.ಸಿದ್ಧಾರೆಡ್ಡಿ ಎಂಬವರು 2023ರ ಸೆ.25ರಂದು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಶೀಲಿಸುವ ಸಲುವಾಗಿ ಆಯೋಗದಲ್ಲಿರುವ ಸದಸ್ಯರುಗಳನ್ನೊಳಗೊಂಡ ಸದಸ್ಯರ ಸಮಿತಿಯನ್ನು ಆಯೋಗವು ರಚಿಸಿತು ಎಂದು ಅವರು ಹೇಳಿದರು.
ಆ ಸಮಿತಿಯು ತನ್ನ ಅಂತಿಮ ವರದಿಯಲ್ಲಿ 10 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇನ್ನುಳಿದ ಕಳಂಕರಹಿತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಜಾರಿ ಮಾಡಬೇಕು. ಅಲ್ಲದೇ, ಸಮಿತಿಯ ವರದಿಯನ್ನು ಸರಕಾರಕ್ಕೆ ಕಳುಹಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಹೆಚ್ಚಿನ ತನಿಖೆಯನ್ನು ಪೊಲೀಸ್/ ಸಿಐಡಿ ಮುಖಾಂತರ ಮಾಡಿಸಬೇಕು ಎಂದು ಶಿಫಾರಸ್ಸು ಸಲ್ಲಿಕೆ ಮಾಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಪ್ರಕರಣದಲ್ಲಿ ಆಯ್ಕೆಯಾದ ಅಭ್ಯರ್ಥಿ ವಿಶ್ವಾಸ್ ಎಂಬವರು ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯವು ‘ಈ ಪ್ರಕರಣದಲ್ಲಿ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕೈಗೊಳ್ಳದಂತೆ’ ನಿರ್ದೇಶನ ನೀಡಿದೆ. ಪ್ರಕರಣ ಇತ್ಯರ್ಥ ಆದ ಕೂಡಲೇ ಈ ಕುರಿತು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಕೆಪಿಎಸ್‍ಸಿಯಲ್ಲಿ ಸುಧಾರಣೆ: ಕೆಪಿಎಸ್‍ಸಿ ನಡೆಸುವ ಎಲ್ಲಾ ಪರೀಕ್ಷೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಲಾಗುತ್ತಿದೆ. ಪ್ರತಿ ಅಭ್ಯರ್ಥಿಗೂ ವೈಯಕ್ತಿಕ ಒಎಂಆರ್ ಹಾಳೆಯನ್ನು ಬಾರ್ ಕೋಡ್ ನೊಂದಿಗೆ ನೀಡಲಾಗುತ್ತಿದ್ದು, ನಂತರ ಅತ್ಯಂತ ಗೌಪ್ಯವಾಗಿ ಸ್ಕ್ಯಾನ್ ಮಾಡಲಾಗುತ್ತಿದೆ. ಕೆಪಿಎಸ್‍ಸಿ ನಿಯಮಗಳು 1957ಕ್ಕೆ ಸಮಗ್ರ ತಿದ್ದುಪಡಿಯನ್ನು ತರಲು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರಗಳು) ಅಧಿನಿಯಮ, 1959ರ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಎಲ್ಲಾ ಇಲಾಖೆಗಳು ಪ್ರತಿ ವರ್ಷ ಹುದ್ದೆಗಳನ್ನು ಆಯ್ಕೆ ಪ್ರಾಧಿಕಾರಗಳಿಗೆ ನಿಯಮಿತವಾಗಿ ಬಿಡುಗಡೆ ಮಾಡಲು ವಾರ್ಷಿಕ ವೇಳಾಪಟ್ಟಿಯನ್ನು ನಿಗಧಿಪಡಿಸಿ ತಿಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಅಲ್ಲದೇ, ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆಯಲ್ಲಿನ ಕನ್ನಡ ಭಾಷಾಂತರವನ್ನು ಸಮರ್ಪಕವಾಗಿ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗಗಳ ಸಹಯೋಗದೊಂದಿಗೆ ಒಂದು ಕನ್ನಡ ಭಾಷಾ ತಜ್ಞರ ತಂಡವನ್ನು ರಚಿಸಲು ಪ್ರಸ್ತಾಪಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಪಿಎಸ್‍ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಹೇಳುವುದಿಲ್ಲ. ಆರ್. ಅಶೋಕ್ ಅವರು ಕೆಲವು ಹುದ್ದೆಗಳಿಗೆ ಇಂತಿಷ್ಟು ದರ ನಿಗದಿ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಅದನ್ನು ನಾನು ಅಲ್ಲಗೆಳೆಯುವುದಿಲ್ಲ. ಕೆಪಿಎಸ್‍ಸಿಗೆ ಒಳ್ಳೆಯವರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಸರ್ಚ್ ಕಮಿಟಿಯನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ