ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚ: ಲೋಕಾಯುಕ್ತ ತನಿಖೆಗೆ ಕಸಾಪ ಕಾರ್ಯಕಾರಿ ಸಮಿತಿ ತೀರ್ಮಾನ

ಬೆಂಗಳೂರು: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಿರುವ ವೆಚ್ಚವೂ ಸೇರಿದಂತೆ ಆಮೂಲಾಗ್ರವಾಗಿ ತನಿಖೆ ಮಾಡಲು ಲೋಕಾಯುಕ್ತರನ್ನು ಕೋರಲು ಕಸಾಪ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನಿಸಿದೆ.
ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರದಿಂದ ಮಂಡ್ಯ ಜಿಲ್ಲಾಡಳಿತಕ್ಕೆ ಬಿಡುಗಡೆಯಾದ 30 ಕೋಟಿ ರೂ. ಅನುದಾನದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಡಳಿತದಿಂದ ಪಡೆದು ಕೊಂಡಿದ್ದು ಕೇವಲ 2.5 ಕೋಟಿ ರೂ.ಗಳನ್ನು ಮಾತ್ರ. ಉಳಿದ 27.5 ಕೋಟಿ ರೂ.ಗಳನ್ನು ಮಂಡ್ಯ ಜಿಲ್ಲಾಡಳಿತವೇ ನಿರ್ವಹಿಸಿದೆ.
ವೇದಿಕೆ, ಆಹಾರ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಮಿಯಾನದಿಂದ ಹಿಡಿದು ಪೊರಕೆ ಖರೀದಿಯವರೆಗೆ ಹಣ ದುರುಪಯೋಗದ ಅಪಾದನೆಗಳು ಬಂದಿದ್ದು, ಸ್ಕೈ ಬ್ಲ್ಯೂ ಇವೆಂಟ್ ಮ್ಯಾನೆಜ್ಮಂಟ್ ನಿರ್ವಹಣೆ, ಇವೆಲ್ಲವೂ ಜಿಲ್ಲಾಡಳಿತದ ವ್ಯಾಪ್ತಿಗೇ ಬರುತ್ತವೆ. ಎನ್ನುವುದು ಗೊತ್ತಿದ್ದರೂ ಸಹ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಸಾಹಿತ್ಯ ಪರಿಷತ್‍ನ ಮೇಲೆ ನಿರಂತರವಾಗಿ ಹಣದ ದುರುಪಯೋಗದ ಕುರಿತು ಆಪಾದನೆ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತನ್ನ ಪಾರದರ್ಶಕತೆಯನ್ನು ಸಾಬೀತು ಮಾಡಲು ಕನ್ನಡ ಸಾಹಿತ್ಯ ಪರಿಷತ್ ಮಾಡಿದ ವೆಚ್ಚವೂ ಸೇರಿದಂತೆ ಎಲ್ಲವನ್ನೂ ಲೋಕಾಯುಕ್ತದ ತನಿಖೆಗೆ ಒಪ್ಪಿಸಲು, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಣಿ ಸರ್ವಾನುಮತದಿಂದ ತೀರ್ಮಾನಿಸಿದೆ.
ಕನ್ನಡ ಸಾಹಿತ್ಯ ಪರಿಷತ್‍ನ ಆರ್ಥಿಕ ವ್ಯವಹಾರ ಪಾರದರ್ಶಕವಾಗಿದೆ. ಕಸಾಪದ ಆಂತರಿಕ ಲೆಕ್ಕ ಪರಿಶೋಧಕರ ಜೊತೆಗೆ ಶಾಸನಬದ್ಧ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರಿಂದಲೂ ತಪಾಸಣೆ ನಡೆಸಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್‍ನ ಎಲ್ಲಾ ಖರ್ಚು ವೆಚ್ಚಗಳೂ ಕಸಾಪ ನಿಬಂಧನೆಯ ಅನ್ವಯ ರೂಪುಗೊಂಡಂತಹ ‘ಹಣಕಾಸು ಸಮಿತಿ’ಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗಿರುತ್ತೆ ಎಂದು ಪ್ರಕಟನೆ ತಿಳಿಸಿದೆ.







