‘ಕಸಾಪ’ ಯಾವುದೇ ತನಿಖೆಗೆ ಸದಾ ಸಿದ್ಧವಿದೆ: ಮಹೇಶ್ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನ ಆಡಳಿತ ಪಾರದರ್ಶಕವಾಗಿದೆ. ದಾಖಲೆಗಳು ನಿಖರವಾಗಿದ್ದು, ಯಾವುದೇ ರೀತಿಯ ತನಿಖೆಗೆ ಸದಾ ಸಿದ್ಧವಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಪರಿಷತ್‍ನ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಕನ್ನಡ ಸಾಹಿತ್ಯ ಪರಿಷತ್‍ಗೆ ಆಡಳಿತಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ ಸೂಪರ್ ಸೀಡ್ ನಂತಹ ಹಗಲುಗನಸಿನ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಹರಿಬಿಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂಡೂರಿನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿ ಪ್ರಯತ್ನಿಸಿ ಕೈ ಸುಟ್ಟುಕೊಂಡು, ಕಲ್ಲಹಳ್ಳಿಯಲ್ಲಿ ಅಯೋಜಿತವಾಗಿರುವ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿಯೂ ಗಲಾಟೆ ಮಾಡಿ, ತೊಂದರೆ ಕೊಡಲು ಕೆಲವು ವ್ಯಕ್ತಿಗಳ ಗುಂಪು ಕಾರ್ಯಪ್ರವೃತ್ತವಾಗಿ ದುರುದ್ದೇಶದ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಲೆಕ್ಕಪತ್ರದ ಸಂಪೂರ್ಣ ವಿವರಗಳನ್ನು ಹಾಗೂ ಹಣಕಾಸು ಸಮಿತಿ ಮತ್ತು ಕಾರ್ಯಕಾರಿ ಸಮಿತಿ ನೀಡಿರುವ ಅನುಮೋದನೆಗಳ ವಿವರಗಳನ್ನು ನೀಡಲಾಗುತ್ತಿದ್ದು, ಈ ವರದಿಗಳು ವಾರ್ಷಿಕ ಸಭೆಯಲ್ಲಿ ಅನುಮೋದನೆಯಾದರೆ, ವಿಚಾರಣೆಯು ಅನೂರ್ಜಿತವಾಗುತ್ತದೆ ಎಂಬುದನ್ನು ಅಡ್ವೋಕೇಟ್ ಜನರಲ್ ಅವರನ್ನು ಪ್ರತಿನಿಧಿಸಿದ ಅಡಿಷನಲ್ ಅಡ್ವೋಕೇಟ್ ಜನರಲ್ ಅವರೇ ಹೈಕೋರ್ಟ್‍ನ ಮುಂದೆ ಒಪ್ಪಿಕೊಂಡಿದ್ದಾರೆ. ಅದರಿಂದ ಎಲ್ಲರೂ ಗಾಬರಿಯಾಗಿ, ಕಲ್ಲಹಳ್ಳಿಯಲ್ಲಿ ಆಯೋಜಿತವಾಗಿರುವ ವಾರ್ಷಿಕ ಸಭೆಗೆ ವಿವಾದ ಎಬ್ಬಿಸಿ, ಅದು ನಡೆಯದಂತೆ ನೋಡಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಕಸಾಪ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ತನಿಖೆಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್‍ನ ನಿಲುವು ಇನ್ನಷ್ಟು ಸ್ಪಷ್ಟವಾಗಲಿದ್ದು. ಕಳಂಕರಹಿತವಾಗಿ ಹೊರ ಬರಲು ಇದೊಂದು ಸದಾವಕಾಶವೆಂದು ಭಾವಿಸಿ ಮುನ್ನಡೆಯುತ್ತದೆ ಎಂದು ಮಹೇಶ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.







