ಕಸ್ತೂರಿ ರಂಗನ್ ವರದಿ: ಕೇರಳ ಮಾದರಿ ಅನುಸರಿಸಿ: ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ

ಬೆಂಗಳೂರು : ‘ಪಶ್ಚಿಮ ಘಟ್ಟಗಳ ಕುರಿತ ಡಾ.ಕೆ.ಕಸ್ತೂರಿ ರಂಗನ್ ವರದಿ ಸಂಬಂಧ ಕೇರಳ ಸರಕಾರದ ಮಾದರಿಯಲ್ಲೇ ಕರ್ನಾಟಕ ಸರಕಾರವು ಸ್ಥಳೀಯವಾಗಿ ಪರಿಶೀಲನೆ ಮಾಡಿ, ಕಸ್ತೂರಿ ರಂಗನ್ ವರದಿಯಲ್ಲಿ ಶಿಫಾರಸು ಮಾಡಿದ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‍ಎ)ದ ವ್ಯಾಪ್ತಿಯನ್ನು ಕಡಿಮೆ ಮಾಡಲು ಕ್ರಮ ವಹಿಸಬೇಕು’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಸರಕಾರ ಹೊರಡಿಸಿರುವ ಕರಡು ಅಧಿಸೂಚನೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ವರದಿಯಲ್ಲಿ ಹೊಲ, ಗದ್ದೆ, ತೋಟಗಳನ್ನು ಉಪಗ್ರಹ ಚಿತ್ರಗಳ ಮೂಲಕ ಅರಣ್ಯ ಎಂದು ತೋರಿಸಲಾಗಿದೆ. ಈ ಅಂಶವನ್ನು ಸರಕಾರವು ಕೋರ್ಟ್‍ಗೆ ಮನವರಿಕೆ ಮಾಡಬೇಕಿದೆ. ಹಾಗೆಯೇ ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಸಮನ್ವಯತೆ ಮೂಡಿಸಬೇಕು ಎಂದು ಸಲಹೆ ನೀಡಿದರು.
‘ಪಶ್ಚಿಮ ಘಟ್ಟ ಉಳಿಸಲು ಹೋರಾಡುತ್ತಿರುವ ಗೋವಾ ಫೌಂಡೇಶನ್ ಹಸಿರು ನ್ಯಾಯ ಪೀಠದ ಮೂಲಕ ಕೇಂದ್ರ ಸರಕಾರವನ್ನು ಕಟ್ಟಿ ಹಾಕಿದೆ. ಕೇಂದ್ರಕ್ಕೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ 7ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದು, ಇನ್ನೂ ಜಾರಿ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಠಿಣ ಪರಿಸ್ಥಿತಿಯಲ್ಲಿವೆ’ ಎಂದು ಅಶೋಕ್ ಉಲ್ಲೇಖಿಸಿದರು.
ಈ ವರದಿ ಜಾರಿಯಾದರೆ ಆ ಭಾಗದ ರೈತರು, ಬಡವರು ಮತ್ತು ವಿದ್ಯುತ್ ಯೋಜನೆಗಳಿಗೆ ಸಮಸ್ಯೆಯಾಗಲಿದೆ. ಆ ಭಾಗದ ಜನರ ನೋವನ್ನು ಕಾಂಗ್ರೆಸ್ ಸರಕಾರ ಆಲಿಸಬೇಕು. ಈ ವರದಿ ವಿಚಾರದಲ್ಲಿ ಸರ್ವಾನುಮತದ ತೀರ್ಮಾನವಾಗಬೇಕು. ಸರಕಾರ ತನ್ನ ಸ್ಪಷ್ಟ ನಿಲುವನ್ನು ತಿಳಿಸಬೇಕು. ಈ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಸೂಚನೆ ಕೊಟ್ಟಿದೆಯೇ ಹೊರತು ಪ್ರಧಾನಿ ಮೋದಿ ಅವರೇನೂ ಸ್ವಯಂ ಪ್ರೇರಿತವಾಗಿ ಆದೇಶ ಮಾಡಿಲ್ಲ. ಆದುದರಿಂದ ರಾಜ್ಯ ಸರಕಾರದ ಸಚಿವರು ರಾಜಕೀಯ ಕಾರಣಕ್ಕಾಗಿ ಪ್ರಧಾನಿ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಅಶೋಕ್ ಒತ್ತಾಯಿಸಿದರು.
‘2010ರಲ್ಲಿ ಯುಪಿಎ ಸರಕಾರದಲ್ಲಿ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್, ತಮಿಳುನಾಡಿಗೆ ಹೋಗಿ ಪಶ್ಚಿಮ ಘಟ್ಟಗಳ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಅದೇ ಸಭೆಯ ಒತ್ತಾಯದ ಮೇರೆಗೆ ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. 316 ಪುಟಗಳ ಈ ವರದಿ ಪಶ್ಚಿಮ ಘಟ್ಟ ಉಳಿಸುವ ಕುರಿತು ಶಿಫಾರಸುಗಳನ್ನು ಮಾಡಿತ್ತು’ ಎಂದು ಅಶೋಕ್ ತಿಳಿಸಿದರು.
ಕೇರಳ ಮಾದರಿಯಲ್ಲೇ ಉಪಗ್ರಹ ಸಮೀಕ್ಷೆಯ ಬದಲು ಭೌತಿಕವಾಗಿ ಸಮೀಕ್ಷೆ ಮಾಡಬೇಕು. ಕೇರಳದವರು ‘ಬಫರ್ ಝೋನ್’ ಅನ್ನು ಶೂನ್ಯ ಮಾಡಿದ್ದಾರೆ. ಎನ್‍ಜಿಟಿ, ರಾಜ್ಯ ಸರಕಾರದ ತೀರ್ಮಾನಗಳನ್ನು ಪರಿಗಣಿಸಬೇಡಿ ಎಂದು ಹೇಳಿದೆ. ಹೀಗಾಗಿ ಈ ಸಂಬಂಧ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ವಿಚಾರದಲ್ಲಿ ನಾವು ಸಿದ್ಧ. ರಾಜಕೀಯವನ್ನು ಬದಿಗಿಟ್ಟು ಜನರ ಒಳಿತಿಗೆ ಸೂಕ್ತ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಅಶೋಕ್ ತಿಳಿಸಿದರು.






