ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದವರಿಗೆ ದಂಡ : ಕೆ.ಎಚ್.ಮುನಿಯಪ್ಪ

ಕೆ.ಎಚ್.ಮುನಿಯಪ್ಪ
ಬೆಂಗಳೂರು : ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿರುವವರು ಕೂಡಲೇ ವಾಪಸ್ ಮಾಡಬೇಕು, ಇಲ್ಲದಿದ್ದರೆ ಕಾನೂನಿನ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಇಲ್ಲದೇ ಇರುವ ಸಾಕಷ್ಟು ಜನರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇವರಿಗೆ ಕಾರ್ಡ್ ವಾಪಸ್ ಕೊಡಲು ಮನವಿ ಮಾಡುತ್ತೇವೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಜಾಹೀರಾತು ಹೊರಡಿಸುತ್ತೇವೆ. ಮನವಿ ಮಾಡಿದ ಮೇಲೂ ಕಾರ್ಡ್ ವಾಪಸ್ ಕೊಡದಿದ್ದರೆ ದಂಡ ಪ್ರಯೋಗ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಡ್ ಪರಿಶೀಲನೆ ಪ್ರಾರಂಭ ಮಾಡಲಾಗುತ್ತದೆ. ಮನವಿ ಬಳಿಕವೂ ಕಾರ್ಡ್ ವಾಪಸ್ ಕೊಡದೇ ಹೋದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಂಡರೆ ಕಾನೂನಿನ ಅಡಿಯಲ್ಲಿ ದಂಡ ಪ್ರಯೋಗ ಮಾಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಆಹಾರ ಇಲಾಖೆಯ ಸಮಗ್ರ ಸುಧಾರಣೆಗೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಎಂಎಸ್ಪಿ ಖರೀದಿ ಪ್ರಕ್ರಿಯೆಯಲ್ಲಿ ಪಾದರ್ಶಕವಾದ ಅನುಷ್ಠಾನ ತರಲು ತಿಳಿಸಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.
ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಕಾನೂನು ಮಾಪನಶಾಸ್ತ್ರ ಇಲಾಖೆ ಪುನಾರಚನೆ ಮಾಡಿ, ಅವರಿಗೆ ಅವಶ್ಯಕ ವಾಹನಗಳನ್ನು ಒದಗಿಸಿ, ಇಲಾಖೆಯ ಅಧಿಕಾರಿಗಳು ತಪಾಸಣಾ ಹೆಚ್ಚು ಮಾಡಲು ಗುರಿ ನಿಗದಿಪಡಿಸಲಾಗಿತ್ತು. ಇದರಿಂದ 2023-24ರಲ್ಲಿ ರಾಜಸ್ವ ಸಂಗ್ರಹಕ್ಕೆ 53.33 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 83.19 ಕೋಟಿ ರೂ. ರಾಜಸ್ವವನ್ನು ಸಂಗ್ರಹಿಸಲಾಗಿತ್ತು ಎಂದು ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದರು.
2024-25ನೇ ಸಾಲಿನಲ್ಲಿ 66 ಕೋಟಿ ರೂ. ರಾಜಸ್ವ ಸಮಗ್ರ ಗುರಿಯಿತ್ತು. ಜನವರಿ 63 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಮಾರ್ಚ್-2025ರ ಅಂತ್ಯಕ್ಕೆ 20 ಕೋಟಿ ರೂ. ರಾಜಸ್ವ ಸಂಗ್ರಹಿಸುವ ನಿರೀಕ್ಷೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಪ್ರಕರಣವನ್ನು ದಾಖಲಿಸಲು ಮತ್ತು ದಂಡ ವಸೂಲಿ ಮಾಡಲು ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಇಲಾಖೆಯ ಬಹುದಿನದ ಬೇಡಿಕೆ ಆಹಾರ ಇಲಾಖೆಯ ಕಛೇರಿಗಳ ಸಂಕೀರ್ಣ ಆಹಾರಸೌಧವನ್ನು 50.00 ಕೋಟಿ ರೂ. ವೆಚ್ಚದಲ್ಲಿ ಆಲಿ ಆಸ್ಕರ್ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ರಾಗಿ-ಭತ್ತ-ಜೋಳಕ್ಕೆ ಕೇಂದ್ರ ಬೆಂಬಲ: ಕೇಂದ್ರ ಸರಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ 4,290 ರೂ. ನಿಗದಿಪಡಿಸಿದೆ. ಮತ್ತು ಖರೀದಿ ಗುರಿಯನ್ನು 4.40 ಎಲ್ಎಂಟಿ ನಿಗದಿಪಡಿಸಿದೆ. ಅದೇ ರೀತಿ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,300 ರೂ. ‘ಎ’ಗ್ರೇಡ್ ಭತ್ತಕ್ಕೆ 2,320 ರೂ. ನಿಗದಿಪಡಿಸಿದೆ. ಇನ್ನು ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ 3,371 ರೂ., ಮಾಲ್ಡಂಡಿ ಜೋಳಕ್ಕೆ 3,421 ರೂ. ಕೇಂದ್ರ ನಿಗದಿಪಡಿಸಿದೆ ಎಂದು ಕೆ.ಎಚ್.ಮುನಿಯಪ್ಪ ವಿವರಿಸಿದರು.







