ಖಾತೆ ಹಂಚಿಕೆ | ರಾಮಲಿಂಗಾರೆಡ್ಡಿ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಕೆ.ಎಚ್.ಮುನಿಯಪ್ಪ

ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರೂ ಕೂಡ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೇವನಹಳ್ಳಿಯಲ್ಲಿ ಮಾತನಾಡಿರುವ ಅವರು, "ಖಾತೆ ಹಂಚಿಕೆ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡುವಂತೆ ಮನವಿ ಮಾಡಿ"ದ್ದಾಗಿ ತಿಳಿಸಿದ್ದಾರೆ.
‘ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ ತಕ್ಕ ಗೌರವ ಸಿಕ್ಕಿಲ್ಲ. ನನ್ನ ಹಿರಿತನವನ್ನು ಪರಿಗಣಿಸುವವರೆಗೆ ನೀಡಲಾಗಿರುವ ಖಾತೆಯನ್ನು ವಹಿಸಿಕೊಳ್ಳುವುದಿಲ್ಲ. ತಪ್ಪು ತಿದ್ದಿ ಕೊಳ್ಳಬೇಕು’ ಎಂದು ಹೇಳಿದ್ದಾರೆ.
ಹಾಗೆಯೇ, ಕಾಂಗ್ರೆಸ್ ನನಗೆ ತಾಯಿಯ ರೀತಿ. ಹಾಗಾಗಿ ರಾಜೀನಾಮೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.




