‘ಕನಿಷ್ಠ ಬೆಂಬಲ ಬೆಲೆ ಯೋಜನೆಯ ಬಾಕಿ ಮೊತ್ತ 1,446 ಕೋಟಿ ರೂ.ಬಿಡುಗಡೆಗೆ ಮನವಿ’; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ

ಹೊಸದಿಲ್ಲಿ : ರಾಜ್ಯಕ್ಕೆ ಬರಬೇಕಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಾಕಿ ಬರಬೇಕಿರುವ 1,446.36 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿಯವರಿಗೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದ್ದಾರೆ.
ಮಂಗಳವಾರ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಹೊಸದಿಲ್ಲಿಯ ಕೃಷಿ ಭವನದಲ್ಲಿ ನಡೆದ ಆಹಾರ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದ ಕೆ.ಎಚ್.ಮುನಿಯಪ್ಪ, ಕೇಂದ್ರ ಸರಕಾರದ ಮಾರ್ಗಸೂಚಿಗಳಂತೆ ರಾಜ್ಯ ಸರಕಾರವು ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಯೋಜನೆಯಡಿ ರೈತರಿಂದ ಧಾನ್ಯಗಳು ಹಾಗೂ ಭತ್ತ/ಕಸ್ಟಮ್ ಮಿಲ್ಡ್ ರೈಸ್ ಖರೀದಿ ಕಾರ್ಯವನ್ನು ನಿಯಮಾನುಸಾರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ಖರೀದಿಸಲಾದ ಆಹಾರ ಧಾನ್ಯಗಳನ್ನು ಕೇಂದ್ರ ಪೂಲ್‍ಗೆ ಸೇರಿಸಿ, ಭಾರತ ಸರಕಾರದ ಅನುಮೋದನೆಯೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಿಗದಿತ ಪ್ರಕ್ರಿಯೆಯಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪರಿಹಾರ ದಾವೆಗಳನ್ನು ಸಲ್ಲಿಸಿದೆ ಎಂದು ಮುನಿಯಪ್ಪ ಹೇಳಿದರು.
ಆದರೆ, ಖರೀದಿ ಋತು 2023-24 ಹಾಗೂ 2024-25ಕ್ಕೆ ಸಂಬಂಧಿಸಿದಂತೆ 1,446.36 ಕೋಟಿ ರೂ. ಮೊತ್ತದ ತಾತ್ಕಾಲಿಕ ಎಂ.ಎಸ್.ಪಿ ಪರಿಹಾರ ಮೊತ್ತವು ಬಹುಕಾಲದಿಂದ ಬಾಕಿ ಉಳಿದಿರುವುದು ರಾಜ್ಯದ ಆರ್ಥಿಕ ಸಂಪನ್ಮೂಲಗಳ ಮೇಲೆ ಗಂಭೀರ ಒತ್ತಡವನ್ನು ಉಂಟು ಮಾಡುತ್ತಿದೆ. ಇದಲ್ಲದೆ, 2025-26ರ ಖರೀದಿ ಋತುವಿನ ಕಾರ್ಯಾಚರಣೆಗಳು ಈಗಾಗಲೇ ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನ ಜ.31ರ ತನಕ 2,86,365ಕ್ಕೂ ಅಧಿಕ ರೈತರು ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಗಮನ ಸೆಳೆದರು.
ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದು, ಎಂಎಸ್‍ಪಿ ವ್ಯವಸ್ಥೆಯ ಮೇಲಿನ ಅವರ ವಿಶ್ವಾಸವನ್ನು ಕಾಯ್ದುಕೊಳ್ಳುವುದು ಹಾಗೂ ಪ್ರಸ್ತುತ ನಡೆಯುತ್ತಿರುವ ಖರೀದಿ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ಹಣದ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ ಎಂದು ಮುನಿಯಪ್ಪ ಹೇಳಿದರು.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಬಹುಕಾಲದಿಂದ ಬಾಕಿ ಉಳಿದಿರುವ ಎಂಎಸ್‍ಪಿ ಪರಿಹಾರ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಇದರಿಂದ ರಾಜ್ಯ ಸರಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ಪಾವತಿಯನ್ನು ಮಾಡಲಿದ್ದು, ಖರೀದಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರದ ಕಾರ್ಯದರ್ಶಿ ಕನಗವಲ್ಲಿ, ಆಹಾರ ನಿಗಮದ ನಿರ್ದೇಶಕ ಜಗದೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.






