"ಮೂರು ದಿನ ಏಕಾಂಗಿಯಾಗಿ ಕಾಡಿನಲ್ಲಿ ಓಡಾಡಿರುವ ಶರಣ್ಯ ಧೈರ್ಯವಂತೆ"; ಶೋಧ ಕಾರ್ಯಾಚರಣೆ ಮಾಡಿದ ಅಧಿಕಾರಿ-ಸಿಬ್ಬಂದಿಗೆ ಈಶ್ವರ ಖಂಡ್ರೆ ಅಭಿನಂದನೆ

ಬೆಂಗಳೂರು: ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಎ.2ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ (36) ಪತ್ತೆಯಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ರವಿವಾರ ಬೆಂಗಳೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅರಣ್ಯ ಇಲಾಖೆ ಒಂಭತ್ತು ತಂಡಗಳು ಹಗಲಿರುಳು ಕಾರ್ಯಾಚರಣೆ ನಡೆಸಿ ಯುವತಿಯನ್ನು ಕರೆತಂದಿದ್ದಾರೆ. ಅವರನ್ನು ಸುರಕ್ಷಿತವಾಗಿ ಕೇರಳದ ಅವರ ಮನೆಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಚಾರಣಕ್ಕೆ ಬಂದಿದ್ದ ಶರಣ್ಯ ಅವರು ಎ.2ರಂದು ಗುರುವಾರ ಇತರ 15 ಮಂದಿ ಚಾರಣಿಗರೊಂದಿಗೆ ಮತ್ತು ನೇಚರ್ ಗೈಡ್ ಜೊತೆಯಲ್ಲಿ ಚಾರಣಕ್ಕೆ ಹೋಗಿದ್ದರು. ಆದರೆ ಮಧ್ಯಾಹ್ನ ಮೂಲ ನೆಲೆಗೆ ಎಲ್ಲ ಚಾರಣಿಗರು ಬಂದಾಗ ಇವರು ದಾರಿ ತಪ್ಪಿರುವುದು ತಿಳಿಯಿತು. ವಿಷಯ ತಿಳಿದ ಕೂಡಲೇ ಎ.2ರಿಂದಲೇ 5 ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಯುವತಿ ನಾಪತ್ತೆ ಆಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಿಎಂ ಸೂಚನೆಯ ಮೇರೆಗೆ ಇಂದು ಹೆಚ್ಚುವರಿ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಅವರು ವಿವರಿಸಿದರು.
ತಾವು ದಾವಣಗೆರೆ ಉಪ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ವಿಷಯ ತಿಳಿಯಿತು. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಯುವತಿ ಈಗ ಪತ್ತೆಯಾಗಿದ್ದು, ಅವರೊಂದಿಗೆ ಸಹ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು.
ಇಂದು ಹೆಚ್ಚವರಿಯಾಗಿ 40 ಅರಣ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಒಟ್ಟು 9 ತಂಡಗಳು ಶೋಧ ಕಾರ್ಯಚಾರಣೆ ನಡೆಸಿದ್ದವು. ಇದರಲ್ಲಿ ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ದಳ, ಅರಣ್ಯ ಇಲಾಖೆ ಸೇರಿದಂತೆ ಬಹು ಸಂಸ್ಥೆಗಳು ಸಹಯೋಗ ನೀಡಿದ್ದವು. ಸ್ಥಳೀಯ ಬುಡಕಟ್ಟು ಜನರೂ ಶೋಧ ಕಾರ್ಯಾಚರಣೆಗೆ ನೆರವಾಗಿದ್ದರು. ಎಲ್ಲರಿಗೂ ತಾವು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೂರು ದಿನವಾದರೂ ಏಕಾಂಗಿಯಾಗಿ ಕಾಡಿನಲ್ಲಿ ಓಡಾಡಿರುವ ಅವರು ಧೈರ್ಯವಂತೆಯಾಗಿದ್ದಾರೆ. ಕಾಡಿನಲ್ಲಿ ಮೊಬೈಲ್‍ಫೋನ್ ಸಂಪರ್ಕ ಸಿಗುವುದಿಲ್ಲ. ಹೀಗಾಗಿ ಅವರು ಇದ್ದ ನಿಶ್ಚಿತ ಸ್ಥಳದ ಮಾಹಿತಿ ತಿಳಿದಿರಲಿಲ್ಲ. ಹೀಗಾಗಿ ಶೋಧ ವಿಳಂಬವಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಯಾರೇ ಯಾವುದೇ ರಾಜ್ಯದಿಂದ ಚಾರಣಕ್ಕೆ ಬಂದು ನಾಪತ್ತೆಯಾದರೆ, ಅವರನ್ನು ಹುಡುಕುವ ಜವಾಬ್ದಾರಿ ನಮ್ಮ ಸರಕಾರದ ಮೇಲಿರುತ್ತದೆ. ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.







