ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ: ಸಚಿವ ಕೃಷ್ಣಭೈರೇಗೌಡ

ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ಅರಣ್ಯ(ಜಂಗಲ್) ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದು, ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಶಾರದಾ ಪೂರ್ಯಾನಾಯ್ಕ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರಕಾರಗಳು ಸರಿಯಾದ ಹೆಜ್ಜೆ ಇಟ್ಟಿಲ್ಲ. ಆದರೆ, ಅದನ್ನು ನಾವು ಸರಿ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಉಲ್ಲೇಖಿಸಿದರು.
ಈಗಾಗಲೇ ಬೆಂಗಳೂರು ವಿಭಾಗ ಪ್ರದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಇದರ ನೈಜತೆ ಪರಿಶೀಲನೆಯ ಜವಾಬ್ದಾರಿ ಕೊಟ್ಟಿದ್ದೇವೆ. ತನಿಖೆ ಆರಂಭವಾಗಿದೆ. ಆದರೆ, ಪ್ರಗತಿ ಆಗಿಲ್ಲ. ತನಿಖೆಯನ್ನು ಶೀಘ್ರದಲ್ಲಿ ಮುಗಿಸಲು ಸೂಚಿಸಿದ್ದೇನೆ ಎಂದೂ ಅವರು ಹೇಳಿದರು.
"ಬಗರ್ ಹುಕುಂ ಅರ್ಜಿ ಅನ್ಯಾಯವಾದರೆ ಗಮನಕ್ಕೆ ತನ್ನಿ"
ಬಗರ್ ಹುಕುಂ ಅರ್ಜಿಗಳ ವಿಲೇ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಿದ್ದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಎಂ.ಟಿ. ಕೃಷ್ಣಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಬಗರ್ ಹುಕುಂ ಸಮಿತಿ ಮುಂದೆ ಅಧಿಕಾರಿಗಳು ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬ ಕಾನೂನು ಇದೆ. ಹೀಗಾಗಿ ಅಧಿಕಾರಿಗಳು ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತ್ಯಜಿಸಿಬಿಡುತ್ತಾರೆ. ಈ ಎಲ್ಲ ಪ್ರಕ್ರಿಯೆಗಳೂ ಕಾನೂನಿನಲ್ಲೇ ಇದ್ದು, ಕಾನೂನು ಮೀರಿ ಏನೂ ಮಾಡಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ಒಂದೆರಡು ರೈತರಿಗೆ ಅನ್ಯಾಯ ಆಗಿದ್ದರೆ ಶಾಸಕರು ನನ್ನ ಗಮನಕ್ಕೆ ತನ್ನಿ, ಸಮಸ್ಯೆಯನ್ನು ನಾನು ಸರಿಪಡಿಸುತ್ತೇನೆ ಎಂದರು.
ಗೋಮಾಳ ಜಮೀನನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಅವರು, ಕೆಲವು ಶಾಸಕರು ಗೋಮಾಳ ಭೂಮಿಗೆ ಸಂಬಂಧಿಸಿ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, ನಮ್ಮ ಸರಕಾರ ಬಂದ ಮೇಲೆ ಕಾನೂನನ್ನು ಮೀರಿ ಏನೂ ಮಾಡುತ್ತಿಲ್ಲ. ನಾವು ಯಾವುದನ್ನೂ ಜಿಲ್ಲಾಧಿಕಾರಿಗಳಿಗೆ ಕೊಟ್ಟಿಲ್ಲ. ಕಾನೂನನ್ನು ಯತಾವತ್ ಅನುಸರಿಸುತ್ತಿದ್ದೇವೆ. ಕಾನೂನಿನಲ್ಲಿ ಒಂದು ಅಕ್ಷರ ಕೂಡ ಬದಲಿಸಿಲ್ಲ. ನಾವು ಕಾನೂನು ಬದಲಿಸಿದ್ದರೆ ಸದಸ್ಯರು ತಿಳಿಸಲಿ ತಿದ್ದಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಸದಸ್ಯ ಕೆ.ವೈ.ನಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ಅದೇ ಗ್ರಾಮ ಅಥವಾ ಪಕ್ಕದ ಗ್ರಾಮದ ಗೋಮಾಳ ಹಾಗೂ ಅರಣ್ಯದಲ್ಲಿ ಜಾನುವಾರು ಮೇಯಿಸಲು ಅವಕಾಶವಿದ್ದರೆ ಹೆಚ್ಚುವರಿ ಗೋಮಾಳವನ್ನು ಮಂಜೂರು ಮಾಡಲು 10 ದಿನದಲ್ಲಿ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಸದಸ್ಯ ಸುರೇಶ್ಬಾಬು ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಚೇರಿಗೆ ಗೋಮಾಳ ನೀಡಲಾಗಿದೆ. ಬಡವರಿಗಾದರೆ ಕಾನೂನು ಹೇಳುತ್ತೀರಿ. ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಸುರೇಶ್ಗೌಡ ಮಾತನಾಡಿ, ತುಮಕೂರಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಚೇರಿಗೆ 2 ಎಕರೆ ಜಾಗ ಕೊಡಲಾಗಿದೆ ಎಂದು ಉಲ್ಲೇಖಿಸಿದರು.







