ಕೇಂದ್ರ ಸರಕಾರದ ಭದ್ರತಾ ಲೋಪದ ಕಾರಣ ಪಹಲ್ಗಾಮ್ ನಲ್ಲಿ 26 ಅಮಾಯಕ ನಾಗರಿಕರ ಹತ್ಯೆಯಾಯಿತು: ಮಲ್ಲಿಕಾರ್ಜುನ ಖರ್ಗೆ
"ಕಾಶ್ಮೀರ ಪ್ರವಾಸ ರದ್ದುಗೊಳಿಸಿದ ಮೋದಿ ಪ್ರವಾಸಿಗರಿಗೆ ಏಕೆ ಎಚ್ಚರಿಕೆ ನೀಡಲಿಲ್ಲ?"

ಮಲ್ಲಿಕಾರ್ಜುನ ಖರ್ಗೆ (PTI)
ಹೊಸಪೇಟೆ: ಕೇಂದ್ರ ಸರಕಾರದ ಭದ್ರತಾ ಲೋಪದ ಕಾರಣಕ್ಕೆ ಪಹಲ್ಗಾಮ್ ನಲ್ಲಿ ಭಾರತದ 26 ಅಮಾಯಕ ನಾಗರಿಕರ ಹತ್ಯೆಯಾಯಿತು. ಪ್ರವಾಸಿಗರಿಗೆ ಪೊಲೀಸ್, ಗಡಿ ಭದ್ರತಾ ಪಡೆಯ ರಕ್ಷಣೆ ನೀಡದೆ ಜೀವ ತೆಗೆದಿದ್ದು ಕೇಂದ್ರ ಸರಕಾರ. ಆದರೂ ಪ್ರಧಾನಿ ಇದರ ಬಗ್ಗೆ ಒಂದು ಮಾತು ಆಡಲಿಲ್ಲ. ಕೇವಲ ತಮಗೆ ತೋಚಿದ್ದನ್ನು ಹೇಳಿಕೊಂಡು ಹೋದರು. ನಾನು ಕೇಳಿದ ಒಂದೇ ಒಂದು ಪ್ರಶ್ನೆಗೆ ಇದುವರೆಗೂ ಉತ್ತರ ನೀಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಮಂಗಳವಾರ ರಾಜ್ಯ ಸರಕಾರವು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರಕಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಮರ್ಪಣೆ ಸಂಕಲ್ಪ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎ.17 ರಂದು ಕಾಶ್ಮೀರಕ್ಕೆ ಪ್ರಧಾನಮಂತ್ರಿ ಹೋಗಬೇಕಿತ್ತು. ಆದರೆ ಅಲ್ಲಿನ ಗುಪ್ತಚರ ಇಲಾಖೆ ನೀವು ಬರುವ ಸಮಯದಲ್ಲಿ ಇಲ್ಲಿ ಗಲಾಟೆಯಾಗುತ್ತದೆ ಎಂದು ತಿಳಿಸಿದರು. ಈ ಕಾರಣಕ್ಕೆ ಅವರು ಅಲ್ಲಿಗೆ ಹೋಗುವುದನ್ನು ರದ್ದು ಮಾಡಿದರು. ಇದೇ ಮಾತನ್ನು ನೀವು ಏಕೆ ಪ್ರವಾಸಿಗರಿಗೆ ಹೇಳಲಿಲ್ಲ. ಇದಕ್ಕೆ ಪ್ರಧಾನಿ ಉತ್ತರ ನೀಡಬೇಕು. ಅಂದು ಎಚ್ಚರಿಕೆ ನೀಡಿದ್ದರೆ ಜನರು ಸಾಯುತ್ತಿರಲಿಲ್ಲ. ಗಡಿಯಲ್ಲಿ ಘರ್ಷಣೆ ಉಂಟಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಈ ಪಾಕಿಸ್ತಾನದ ಕೆಲಸ ಸದಾ ಭಾರತದ ಮೇಲೆ ಗೂಬೆ ಕೂರಿಸುವುದೇ ಆಗಿದೆ. ಅವರಿಗೆ ಶಕ್ತಿಯಿಲ್ಲ ಎಂದರೂ ಚೀನಾದವರಿಂದ ಬೆಂಬಲ ಪಡೆದು ನಮ್ಮ ಮೇಲೆ ದಾಳಿ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ಎಂದಿಗೂ ಸಹ ನಮ್ಮ ದೇಶ ಸಹಿಸುವುದಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ಇಂತಹ ಹೊತ್ತಿನಲ್ಲಿ ದೇಶ ಮುಖ್ಯವಾಗಬೇಕಿತ್ತು. ಆದರೆ, ಪ್ರಧಾನಿಯೇ ಮುಖ್ಯವಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ದೇಶಕ್ಕಾಗಿ ಹೋರಾಡುವ ಗುತ್ತಿಗೆಯನ್ನು ಬಿಜೆಪಿಯವರು ಮಾತ್ರ ತೆಗೆದುಕೊಂಡಿಲ್ಲ. ನಾವು ಸಹ ದೇಶಕ್ಕಾಗಿ ಹೋರಾಟ ಮಾಡಿದವರೇ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇಂತಹ ದೊಡ್ಡ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ನೀವು ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸಿಗರ ಮೇಲೆ ಈ.ಡಿ ಅಧಿಕಾರಿಗಳನ್ನು ಛೂ ಬಿಟ್ಟಿದ್ದೀರಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ದಾಳಿ ಮಾಡಿಸಿದ್ದೀರಿ. ನಮ್ಮ ಮೇಲೆ ದಾಳಿ ಮಾಡಿಸಿ ಮಣಿಸಬೇಕು ಎನ್ನುವ ಉದ್ದೇಶ ಬಿಜೆಪಿಯವರಿಗೆ ಇದ್ದರೆ ಅದು ಅವರ ಹುಂಬತನ. ಕಾಂಗ್ರೆಸ್ ಪಕ್ಷ ಎಂದಿಗೂ ಯಾರಿಗೂ ಮಣಿಯುವುದಿಲ್ಲ, ಬಗ್ಗುವುದಿಲ್ಲ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ನಡೆಸದೇ ನಮ್ಮ ದೇಶದ ನಿಯೋಗವನ್ನು ಭಯೋತ್ಪಾದಕ ದಾಳಿಯ ಬಗ್ಗೆ ಒಂದಷ್ಟು ದೇಶಗಳಿಗೆ ತಿಳಿಸಲು ಕಳುಹಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯದ್ದು ಬರೀ ಸುಳ್ಳು ಹೇಳುವುದೇ ಕೆಲಸ. ನಾವು ದೇಶದ ಬಗ್ಗೆ ಮಾತನಾಡೋಕೆ ಸಭೆ ಸೇರಿದರೆ ಅವರು ಬಿಹಾರದಲ್ಲಿ ಚುನಾವಣೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದರು. ಎರಡು ಸಲ ಸರ್ವ ಪಕ್ಷ ಸಭೆ ಕರೆದರೂ ಪ್ರಧಾನಮಂತ್ರಿ ಬರಲಿಲ್ಲ. ಅವರಿಗೆ ದೇಶಪ್ರೇಮ ಇದ್ದಿದ್ದರೆ ಏಕೆ ಸರ್ವ ಪಕ್ಷ ಸಭೆಗೆ ಬರಲಿಲ್ಲ. ನಾವುಗಳು ಏನಾದರೂ ಒಂದೇ ಒಂದು ಸಭೆಗೆ ಬರದೇ ಇದ್ದರೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದು ಅವರು ಕಿಡಿಗಾರಿದರು.
ಕೇವಲ ಭಾಷಣ ಮಾಡುವವರಿಂದ, ಬೊಗಳೆ ಮಾತುಗಳಿಂದ ದೇಶ ಉದ್ದಾರವಾಗುವುದಿಲ್ಲ. ಕರ್ನಲ್ ಸೋಫಿಯಾ ಖುರೇಷಿ ಎನ್ನುವ ಮಿಲಿಟರಿಯ ವಕ್ತಾರೆ ಮಾತನಾಡಿದ ಮೇಲೆ ಬಿಜೆಪಿಯ ಶಾಸಕನೊಬ್ಬ ಆಕೆಗೆ ಪಾಕಿಸ್ತಾನದ ನಂಟಿದೆ ಎಂದು ಹೇಳುತ್ತಾನೆ. ಇಂತಹ ಜನರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ಜನರೇ ಹೇಳಬೇಕು. ಸೈನ್ಯದ ವಿರುದ್ಧ ಮಾತನಾಡಿದ ಆತನನ್ನು ಪಕ್ಷದಿಂದ ಕಿತ್ತು ಹಾಕಿ. ಏಕೆ ಇನ್ನೂ ಇಟ್ಟುಕೊಂಡು ಕುಳಿತಿದ್ದೀರಿ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿ ಮೊದಲು ಮಾತನಾಡಿದಾಗ ಬಿಜೆಪಿಯವರು ಟೀಕೆ ಮಾಡಿದರು. ಆದರೆ ಈಗ ಅವರೇ ಜಾತಿ ಗಣತಿ ಪರವಾಗಿದ್ದಾರೆ. ರಾಹುಲ್ ಗಾಂಧಿ ಅವರ ಮಾತಿಗೆ ಮಣಿದ ಪ್ರಧಾನಮಂತ್ರಿ ಸಚಿವ ಸಂಪುಟ ಸಭೆ ಮಾಡಿ ಜಾತಿ ಗಣತಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸವಾಲಿನ ಮಧ್ಯೆ ಗ್ಯಾರಂಟಿಗಳನ್ನು ಈಡೇರಿಸಿದ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ:
ಎರಡು ವರ್ಷದ ಆಡಳಿತ ಅವಧಿಯಲ್ಲಿ ಚುನಾವಣೆಗೆ ಮೊದಲು ಕೊಟ್ಟಂತಹ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿ ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಕೋಟಿ ಅಭಿನಂದನೆಗಳು. ಗ್ಯಾರಂಟಿಗಳನ್ನು ನೀಡಬೇಕು ಜೊತೆಗೆ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು. ಇದು ನಮ್ಮ ಕಾಂಗ್ರೆಸ್ ಸರಕಾರದ ಮುಂದಿದ್ದ ಸವಾಲು. ಇದನ್ನು ಯಶಸ್ವಿಯಾಗಿ ಸರಕಾರ ನೆರವೇರಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯೂ 20 ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದರು. ಅವರು ಎಂತಹ ಗ್ಯಾರಂಟಿಗಳನ್ನು ನೀಡಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿದೆ. ವಿದೇಶದಲ್ಲಿ ಇರುವ ಕಪ್ಪು ಹಣ ತರುತ್ತೇವೆ ಎಂದರು ಅದನ್ನು ತಂದರೇ? ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದರು ಇದು ಸಾಧ್ಯವಾಯಿತೇ? ನೋಟ್ ಬ್ಯಾನ್ ಮಾಡಿ ಬಡವರ ಸಂಸಾರಗಳನ್ನು ಹಾಳು ಮಾಡಿದರು. ಆದರೆ ನಾವು ಮಾತು ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಜಯನಗರ-ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಸಂಸದ ಈ.ತುಕಾರಾಂ, ಸಚಿವರಾದ ಕೃಷ್ಣ ಬೈರೇಗೌಡ, ಎಚ್.ಕೆ.ಪಾಟೀಲ್, ಬಿ.ಎಸ್.ಸುರೇಶ್, ರಹೀಂ ಖಾನ್, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಸಚಿವರು, ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.







