‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಣೆ : ಸಚಿವ ಕೆ.ಎಚ್.ಮುನಿಯಪ್ಪ

ಕೆ.ಎಚ್ ಮುನಿಯಪ್ಪ
ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಇದೇ ತಿಂಗಳಿನಿಂದಲೇ ಹಣದ ಬದಲು ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಪರ್ಯಾಯವಾಗಿ 170 ರೂ. ಹಣ ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆ.ಜಿ. ಅಕ್ಕಿ ವಿತರಿಸಲು ನಿರ್ಧರಿಸಿದ್ದೇವೆ. ಇದೇ ಫೆಬ್ರವರಿಯಿಂದ 10 ಕೆ.ಜಿ. ಅಕ್ಕಿ ಕೊಡುವ ತೀರ್ಮಾನ ಮಾಡಿದ್ದೇವೆ. 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.
ನಮಗೆ ಬೇಕಾಗಿರುವ 5 ಕೆ.ಜಿ. ಅಕ್ಕಿಯನ್ನು ಕೊಡಲು ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಬೇಕಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಂದಿಸಿದ್ದಾರೆ. ಈಗ ಕೇಂದ್ರ ಸಚಿವರು ಅಕ್ಕಿ ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಕೇಂದ್ರ ಸರಕಾರ ಮೊದಲು ಒಂದು ಕೆ.ಜಿ. ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆ.ಜಿ.ಗೆ 22.50 ರೂ.ನಂತೆ ನೀಡಲು ನಿರ್ಧರಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ ಪ್ರತಿ ತಿಂಗಳು 190 ಕೋಟಿ ರೂ. ಉಳಿತಾಯವಾಗಲಿದೆ. ಒಂದೂವರೆ ವರ್ಷದ ಹಿಂದೆ ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ಪ್ರತಿ ಕೆ.ಜಿ.ಗೆ 34 ರೂ. ನೀಡಲು ಸಿದ್ಧವಿದ್ದರೂ ಅಗತ್ಯ ಅಕ್ಕಿ ದೊರೆತಿರಲಿಲ್ಲ. ಹಾಗಾಗಿ ಅಷ್ಟೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರಕಾರ ನಿರ್ಧರಿಸಿತ್ತು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೂರು ತಿಂಗಳು ಹಣ ಹಾಕಿಲ್ಲ. ಒಂದು ವಾರದೊಳಗೆ ಸಕಾಲದಲ್ಲಿ ಹಣ ಹಾಕುತ್ತೇವೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರ್ ವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ 5 ಕೆ.ಜಿ. ಅಕ್ಕಿಗೆ 170 ರೂ.ಗಳಂತೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ ಎಂದು ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ನಗದು ವರ್ಗಾವಣೆ: ಅಕ್ಟೋಬರ್-2024ರಲ್ಲಿ 1,16,39,179 ಕಾರ್ಡ್ಗಳ 4,12,16,838 ಫಲಾನುಭವಿಗಳಿಗೆ 676.79 ಕೋಟಿ ರೂ. ಡಿಬಿಟಿ ಬಿಡುಗಡೆ ಮಾಡಲಾಗಿದೆ. ಡಿಬಿಟಿ ಪ್ರಾರಂಭವಾದ ಜುಲೈ-2023ರಿಂದ ಅಕ್ಟೋಬರ್-2024ರವರೆಗೆ 10,452 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳ ಡಿಬಿಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ನಗರ ಪ್ರದೇಶದಲ್ಲಿ ಶೇ.50ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75ರಷ್ಟು ಅಂತ್ಯೋದಯ/ಆದ್ಯತಾ ಪಡಿತರ ಕಾರ್ಡ್ಗಳನ್ನು ವಿತರಣೆ ಮಾಡಲು ಅವಕಾಶವಿದೆ. ಕರ್ನಾಟಕದ ಜನಸಂಖ್ಯೆ 2011ರ ಜನಗಣತಿ ಪ್ರಕಾರ ನಗರ ಮತ್ತು ಗ್ರಾಮೀಣ ಸೇರಿ ಶೇ.65.96ರಷ್ಟು ವಿತರಣೆ ಮಾಡಲಾಗಿದೆ. ಕೇರಳ-ಶೇ.45.59, ತಮಿಳುನಾಡು-48.81, ತೆಲಂಗಾಣ-53.93, ಆಂಧ್ರ ಪ್ರದೇಶ- ಶೇ.63-79, ಮಹಾರಾಷ್ಟ್ರ-ಶೇ.58.47ರಷ್ಟು ವಿತರಣೆ ಮಾಡಿದ್ದೇವೆ ಎಂದು ಕೆ.ಎಚ್.ಮುನಿಯಪ್ಪ ವಿವರ ನೀಡಿದರು.
ಭಾರತ ಸರಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟ ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವ ಮೂಲಕ ಕರ್ನಾಟಕ ರಾಜ್ಯ ಹಸಿವು ಮುಕ್ತ ಕರ್ನಾಟಕವಾಗಿಸಿರುವುದು ನಮ್ಮ ಸರಕಾರದ ಹೆಮ್ಮೆಯ ವಿಷಯ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆ: ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು 366 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 2024ರ ಡಿಸೆಂಬರ್ 1 ರಿಂದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2025ರ ಮಾರ್ಚ್ 31 ಕೊನೆಯ ದಿನಾಂಕವಾಗಿರುತ್ತದೆ. ಈ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ನಿರ್ದೇಶಕ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಎನ್.ಬಾಬು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
80 ವರ್ಷ ಮೇಲ್ಪಟ್ಟವರ ಮನೆಯ ಬಾಗಿಲಿಗೆ ಪಡಿತರ: ‘2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ’
-ಕೆ.ಎಚ್.ಮುನಿಯಪ್ಪ ಆಹಾರ ಸಚಿವ







