ʼಮುಸ್ಲಿಮ್, ಕ್ರಿಶ್ಚಿಯನ್ ಗುಂಪುಗಳನ್ನು ದಯೆಯಿಲ್ಲದೆ ಕೊಚ್ಚಿ ಹಾಕಿʼ: ವಿವಾದ ಸೃಷ್ಟಿಸಿದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ
ಕಾನೂನು ಕ್ರಮಕ್ಕೆ ಜನರ ಆಗ್ರಹ

ಬೆಂಗಳೂರು : ದೇಶದಲ್ಲಿ ಸನಾತನ ಧರ್ಮವೊಂದೇ ಇರುವುದು, ಉಳಿದೆಲ್ಲವೂ ಗುಂಪುಗಳಷ್ಟೇ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ವರ್ತಮಾನದ ಆಯುಧಗಳನ್ನಿಡಿದು ನಾಶಪಡಿಸಿ, ಕೊಲ್ಲಿ ಎಂದು ಬೆಂಗಳೂರಿನ ಸಮರ್ಥ ಶ್ರೀಧರರಾಶ್ರಮ ಟ್ರಸ್ಟ್‌ನ ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ವಿವಾದಕ್ಕೆ ಎಡೆಮಾಡಿದೆ. ಅದರಲ್ಲಿ, ದುಷ್ಟರನ್ನು ನಾಶಪಡಿಸುವುದಕ್ಕೆಂದೇ ಹಿಂದೂ ಧರ್ಮವಿದೆ. ಆದ್ದರಿಂತ ಯಾವುದೇ ಕರುಣೆಯಿಲ್ಲದೆ ದುಷ್ಟರನ್ನು ಕೊಲ್ಲಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ದಯೆಯಿಲ್ಲದೆ ಕೊಚ್ಚಿ ಹಾಕಿ. ಇಂತಹವರು ನಮ್ಮ ದೇಶ, ಧರ್ಮವನ್ನು ಶಾಂತಿಯಾಗಿರಲು ಬಿಡುವುದಿಲ್ಲ. ಹಿಂದಿನ ಮಹಾನಾಯಕರು ದಯೆ ಇಟ್ಟುಕೊಂಡು ಇಂತಹವನ್ನು ಕೊಲ್ಲದೆ ಬಿಟ್ಟರು. ಈಗಿದು ಮುಗಿದುಹೋಗಬೇಕು, ಪುನಃ ಮಹಾಭಾರತ ಆಗುವ ಅವಶ್ಯಕತೆಯಿಲ್ಲ. ಪುನಃ ಸಮರ್ಥರು ಬರಬೇಕು ಅಥವಾ ಶಿವಾಜಿ ಬರಬೇಕು ಎಂಬ ಅವಶ್ಯಕತೆಯಿಲ್ಲ. ನಾವೇ ಪ್ರತಿಯೊಬ್ಬರೂ ಶಿವಾಜಿಯಾಗಿ ಹೊರಬರಬೇಕು. ನಾನು ಹಿಂದೂ ಸಮಾಜಕ್ಕೆ ಕರೆ ಕೊಡುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಪಂಚದಲ್ಲಿ ಸನಾತನ ಧರ್ಮದವರನ್ನು ಬಿಟ್ಟು ಉಳಿದ ಒಬ್ಬರೂ ಉಳಿಯಬಾರದು. ಈ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ಸರ್ವನಾಶ ಮಾಡಿ, ಒಬ್ಬೊಬ್ಬರೂ ಸಾವಿರ, ಸಾವಿರ ಜನರನ್ನೂ ಹೊಡೆದುಹಾಕಿ, ನಿಮಗೆ ಯಾವ ಪಾಪವೂ ಬರುವುದಿಲ್ಲ. ನನ್ನ ಕರೆಯನ್ನು ನೀವು ಪಾಲನೇ ಮಾಡಬೇಕೆಂದು ಆತ್ಮಾನಂದ ಸರಸ್ವತಿ ಸ್ವಾಮೀಜಿ ಕರೆ ಕೊಡುವ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ.
ಈ ಹೇಳಿಕೆಯು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲಿದ್ದು, ಕೂಡಲೇ ಸ್ವಾಮೀಜಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.







