ಕೆ.ಜೆ. ಥಾಮಸ್ ಕೊಲೆ ಪ್ರಕರಣ : ವಿಶೇಷ ಪ್ರಾಸಿಕ್ಯೂಟರ್ ನೇಮಕಾತಿ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ನಗರದ ಮಲ್ಲೇಶ್ವರದಲ್ಲಿ ನಡೆದಿದ್ದ ಸೈಂಟ್ ಪೀಟರ್ ಪಾಂಟಿಫಿಕಲ್ ಸೆಮಿನರಿಯ ರೆಕ್ಟರ್ ಕೆ.ಜೆ. ಥಾಮಸ್ ಕೊಲೆ ಪ್ರಕರಣದಲ್ಲಿ ರಾಜ್ಯ ಪ್ರಾಸಿಕ್ಯೂಷನ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸದಾಶಿವಮೂರ್ತಿ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಿದ್ದ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸದಾಶಿವಮೂರ್ತಿ ಅವರ ನೇಮಕಾತಿ ಪ್ರಶ್ನಿಸಿ ಫಾದರ್ ಇಲ್ಯಾಸ್ ಡೇನಿಯಲ್, ಫಾದರ್ ವಿಲಿಯಂ ಪ್ಯಾಟ್ರಿಕ್ ಹಾಗೂ ಕಾರ್ಮೆಲ್ ಪೀಟರ್ ಅಲಿಯಾಸ್ ಪೀಟರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಸದಾಶಿವಮೂರ್ತಿ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿ 2023ರ ಸೆಪ್ಟ್ಟಂಬರ್ 15ರಂದು ಸರಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದೆ. ಇದೇ ವೇಳೆ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 24(8)ರ ಅಡಿಯಲ್ಲಿ ವಿಶೇಷ ಸರಕಾರಿ ಅಭಿಯೋಜಕರ ನೇಮಕಕ್ಕೆ ಮುನ್ನ ಆರೋಪಿಗೆ ನೋಟಿಸ್ ನೀಡಲು ಅಥವಾ ಅವರ ವಾದ ಆಲಿಸಲು ನಿರ್ದೇಶಿಸಬೇಕೆಂಬ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಮುಕುಲ್ ದಲಾಲ್ ಹಾಗೂ ಕೇಂದ್ರ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕೆ.ವಿ. ಶಿವಾರೆಡ್ಡಿ ಹಾಗೂ ಕರ್ನಾಟಕ ರಾಜ್ಯ ನಡುವಿನ ಪ್ರಕರಣದಲ್ಲಿ ಈ ನ್ಯಾಯಾಲಯದ ಸಮನ್ವಯ ನ್ಯಾಯಪೀಠ ಹಾಗೂ ಹಾಲಿ ಪ್ರಕರಣದಲ್ಲಿ ಈ ನ್ಯಾಯಾಲಯ ಸೂಚಿಸಿರುವ ಪ್ರಕ್ರಿಯೆಗಳನ್ನು ಅನುಸರಿಸಿ ಅಭಿಯೋಗವನ್ನು (ಪ್ರಾಸಿಕ್ಯೂಷನ್) ನಿಯಮಿತ ಸರಕಾರಿ ಅಭಿಯೋಜಕರಿಂದಲೇ ಮುಂದುವರಿಸಬೇಕೇ ಅಥವಾ ಹೊಸದಾಗಿ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕೇ ಎಂಬುದನ್ನು ರಾಜ್ಯ ಸರಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಒಂದು ವೇಳೆ, ಯಾವುದೇ ಹೊಸ ನೇಮಕಾತಿ ನಡೆಸಿದರೆ ಕಾರಣಗಳನ್ನು ದಾಖಲಿಸಿದ ನಂತರವೇ ಮಾಡಬೇಕು. ಸಂಭಾವನೆಯನ್ನು ದೂರುದಾರರೇ ಭರಿಸಬೇಕಾದಲ್ಲಿ, ಅದನ್ನು ನಿಗದಿತ ರಾಜ್ಯ ಪ್ರಾಧಿಕಾರದ ಬಳಿ ಮುಂಗಡ ಠೇವಣಿಯಾಗಿ ಇರಿಸಬೇಕು ಹಾಗೂ ಆ ಪ್ರಾಧಿಕಾರದ ಮೂಲಕವೇ ವಿಶೇಷ ಸರಕಾರಿ ಅಭಿಯೋಜಕರಿಗೆ ಸಂಭಾವನೆ ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.






