ಶರಾವತಿ ಪಂಪ್ ಸ್ಟೋರೆಜ್ ಯೋಜನೆಯಿಂದ 2 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ: ಕೆ.ಜೆ.ಜಾರ್ಜ್

ಬೆಂಗಳೂರು, ಆ.12: ಶರಾವತಿ ಪಂಪ್ ಸ್ಟೋರೇಜ್ ಯೋಜನೆಯಡಿ ನಾವು ಯಾವುದೆ ಅಣೆಕಟ್ಟು ಕಟುತ್ತಿಲ್ಲ. ಈಗಿರುವ ಅಣೆಕಟ್ಟುಗಳನ್ನೆ ಬಳಕೆ ಮಾಡುತ್ತಿದ್ದೇವೆ. ಈ ಯೋಜನೆಯಿಂದ ನಮಗೆ ಹೆಚ್ಚುವರಿ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ದಿನಕರ್ ಶೆಟ್ಟಿ ಗಮನ ಸೆಳೆದ ಸೂಚನೆಗೆ ಉತ್ತರ ನೀಡಿದ ಅವರು, ಸದ್ಯಕ್ಕೆ ಶರಾವತಿಯಲ್ಲಿ ನಮಗೆ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಸಿಗುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಹೆಚ್ಚುವರಿ 2 ಸಾವಿರ ಮೆಗಾ ವ್ಯಾಟ್ ಸಿಗುತ್ತದೆ. ಅತೀ ಕಡಿಮೆ ಭೂಮಿ ಬಳಸಿಕೊಂಡು ಜಾರಿಗೆ ಬರುತ್ತಿರುವ ಮತ್ತೊಂದು ಯೋಜನೆ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಹೇಳಿದರು.
0.37 ಟಿಎಂಸಿ ನೀರು ಈ ಯೋಜನೆಗೆ ಬಳಕೆ ಮಾಡುತ್ತೇವೆ ಅಷ್ಟೇ. ನೀರನ್ನು ವ್ಯರ್ಥ ಮಾಡುವುದಿಲ್ಲ. ಈಗಾಗಲೇ ಕೇಂದ್ರ ಸರಕಾರದ ಪರಿಸರ ಇಲಾಖೆ, ಇಂಧನ ಇಲಾಖೆ ಅನುಮತಿ ನೀಡಿದೆ. ಎಲ್ಲ ರೀತಿಯ ಅಧ್ಯಯನ ಮಾಡಿ ಈ ಯೋಜನೆ ಕಾರ್ಯಗತಗೊಳಿಸುತ್ತಿದ್ದೇವೆ. 20235ರ ವೇಳೆಗೆ ಪಂಪ್ ಸ್ಟೋರೇಜ್ ಮೂಲಕ 7 ಸಾವಿರ ಮೆ.ವ್ಯಾ ಉತ್ಪಾದನೆಗೆ ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಜಾರ್ಜ್ ತಿಳಿಸಿದರು.
54 ಹೆಕ್ಟೇರ್ ಪ್ರದೇಶದಲ್ಲಿ ಭೂಗತ ಪೈಪ್ ಲೈನ್ ಮಾಡುತ್ತೇವೆ. ಯೋಜನೆ ಜಾರಿ ನಂತರ ಆ ಪ್ರದೇಶದಲ್ಲಿ ಮತ್ತೆ ಅಲ್ಲಿ ಅರಣ್ಯ ಬೆಳೆಯಲಾಗುತ್ತದೆ. ಇದೊಂದು ಮಾದರಿ ಯೋಜನೆ. ಯಾವುದೆ ಪುನರ್ ವಸತಿ ಇಲ್ಲ, ಯಾವ ಭೂಮಿಯೂ ಮುಳುಗಡೆ ಆಗುವುದಿಲ್ಲ. 20235ರಲ್ಲಿ ನಮ್ಮ ಬಳಿ ಅಗತ್ಯಕ್ಕೆ ತಕ್ಕ ವಿದ್ಯುತ್ ಲಭ್ಯವಿಲ್ಲದಿದ್ದರೆ ದೊಡ್ಡ ಆರ್ಥಿಕ ದುಷ್ಪರಿಣಾಮ ಎದುರಿಸಬೆಕಾಗುತ್ತದೆ ಎಂದು ಅವರು ತಿಳಿಸಿದರು.







