ಕನ್ನಡ ಸಾಹಿತ್ಯ ಪರಿಷತ್ಗೆ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯತ್ರಿ ನೇಮಕ

ಕೆ.ಎಂ. ಗಾಯತ್ರಿ,
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಸಹಕಾರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ರಂಗನಾಥ ಜಿ. ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಸಾಹಿತ್ಯ ಪರಿಷತ್ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಥವಾ 3ತಿಂಗಳ ಅವಧಿಗೆ, ಇದರಲ್ಲಿ ಯಾವುದು ಮೊದಲು ಬರುತ್ತೋ ಅಲ್ಲಿಯ ವರೆಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಬಂದಿರುವ ದೂರುಗಳ ಕುರಿತು ಕಸಾಪ ಅಧ್ಯಕ್ಷರು ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಕಾಲಾವಕಾಶ ಕೋರುತ್ತಾ, ಕಾರಣಗಳನ್ನು ಹೇಳುತ್ತಾ, ಸಮಯ ಮುಂದೂಡುತ್ತಿದ್ದಾರೆ. ವಿಚಾರಣಾಂಶಗಳಿಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ನೀಡದೇ ಅನಗತ್ಯ ವಿಳಂಬ ಮಾಡುತ್ತಿದ್ದು, ವಿಚಾರಣೆಗೆ ಸಹಕರಿಸುತ್ತಿಲ್ಲವೆಂದು, ವಿಚಾರಣಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಕಸಾಪ 7 ವಿಚಾರಣಾಂಶಗಳಿಗೆ ಭಾಗಶಃ ದಾಖಲಾತಿಗಳನ್ನು ನೀಡಿರುವುದನ್ನು ಪರಿಶೀಲಿಸಿ ಸದರಿ ಅಂಶಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಿವೆ. ಹಣಕಾಸಿಗೆ ಸಂಬಂಧಿಸಿ 10 ವಿಚಾರಣಾಂಶಗಳಿಗೆ ಕಸಾಪ ದಾಖಲೆ ಮತ್ತು ಲಿಖಿತ ಹೇಳಿಕೆಯನ್ನು ಸಲ್ಲಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕಸಾಪಕ್ಕೆ ಆಡಳಿತಾಧಿಕಾರಿ ನೇಮಕದ ಆದೇಶವನ್ನು ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 29086/ 2025ರಲ್ಲಿ ನೀಡಿರುವು ಮಧ್ಯಂತರ ಆದೇಶದಂತೆ ಹೈಕೋರ್ಟ್ ಗಮನಕ್ಕೆ ತಂದು ಕೋರ್ಟ್ ನೀಡುವ ನಿರ್ದೇಶನದ ನಂತರ ಆದೇಶವನ್ನು ಅನುಷ್ಠಾನಗೊಳಿಸಬೇಕು. ಪ್ರಕರಣದಲ್ಲಿ ಹೈಕೋರ್ಟ್ ನಿದೇರ್ಶನದಂತೆ ಕಸಾಪದ ಪ್ರಭಾರವನ್ನು ವಹಿಸಿಕೊಂಡು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರ ವಿಚಾರಣೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ತ್ವರಿತವಾಗಿ ವಿಚಾರಣಾಧಿಕಾರಿಗಳಿಗೆ ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಭ್ರಷ್ಟಾಚಾರ ಮತ್ತು ದುರಾಡಳಿತ ಅಂತ್ಯಗೊಳ್ಳಲಿ. ಸಾಹಿತ್ಯ ಪರಿಷತ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಟಕವಾಗಿ, ತಮ್ಮೊಂದಿಗೆ ಚುನಾಯಿತರಾಗಿದ್ದವರನ್ನು ಬೆದರಿಸಿ, ಪ್ರಶ್ನೆ ಮಾಡುತ್ತಿದ್ದ ಜಿಲ್ಲಾಧ್ಯಕ್ಷರ ಮತ್ತು ಹಿರಿಯ ಸದಸ್ಯರ ವಿರುದ್ಧ ದೌರ್ಜನ್ಯ ನಡೆಸಿ ದುರಾಡಳಿತ ನಡೆಸುತ್ತಿದ್ದ ಜೋಶಿ, ಕನ್ನಡಿಗರ ತೆರಿಗೆ ಹಣದ ಅನುದಾನವನ್ನು ಮನಸೋಯಿಚ್ಛೆ ದುರ್ಬಳಕೆ ಮಾಡಿಕೊಂಡು ಅತ್ಯಂತ ಕಡು ಭ್ರಷ್ಟಾಚಾರವನ್ನು ಕಸಾಪದಲ್ಲಿ ನಡೆಸಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಬಾಹಿರವಾಗಿ ನಿಬಂಧನೆಗಳನ್ನು ತಿದ್ದುಪಡಿ ಮಾಡಿಕೊಂಡು ದುರಾಡಳಿತ ನಡೆಸಿದ್ದಾರೆ’
-ಎಂ. ಪ್ರಕಾಶಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ
‘ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸತ್ಯಕ್ಕೆ ಸಂದ ಜಯ. ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ, ಸಂಘಟಿತ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ತನಿಖೆ ಸಂಪೂರ್ಣಗೊಂಡು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು’
-ಡಾ.ವಸುಂಧರಾ ಭೂಪತಿ, ಹಿರಿಯ ಲೇಖಕಿ







