ಸಚಿವ ಸಂಪುಟದಿಂದ ವಜಾ; ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದೇನು?

ಕೆ.ಎನ್. ರಾಜಣ್ಣ
ಬೆಂಗಳೂರು, ಆ.11: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಈ ಬೆಳವಣಿಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕೋರಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯ ಶಿಫಾರಸು ಅನ್ನು ಅಂಗೀಕರಿಸಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆ.ಎನ್.ರಾಜಣ್ಣ, ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದೆ. ಈ ಪಿತೂರಿ ಹಿಂದೆ ಯಾರು ಯಾರು ಇದ್ದಾರೆ?, ಏನೇನು ನಡೆದಿದೆ?. ಎಲ್ಲೆಲ್ಲಿ ನಡೆದಿದೆ?. ಎಲ್ಲೆಲ್ಲಿ ಯಾವ ಮುಖಂಡರ ಜೊತೆ ಏನೇನು ನಡೆದಿದೆ ಎಂಬ ಬಗ್ಗೆ ಎಲ್ಲವನ್ನೂ ಕಾಲ ಬಂದಾಗ ತಿಳಿಸುತ್ತೇನೆ ಎಂದು ಹೇಳಿದರು.
ನಮ್ಮ ನಾಯಕ ರಾಹುಲ್ ಗಾಂಧಿ, ವೇಣುಗೋಪಾಲ್, ನಮ್ಮ ಅಧ್ಯಕ್ಷರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬುದು ನನ್ನ ಅನಿಸಿಕೆ. ಆ ತಪ್ಪು ಗ್ರಹಿಕೆ ನಿವಾರಣೆ ಮಾಡಲು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ಹೋಗುತ್ತೇನೆ. ನನ್ನನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದು ಹೈಕಮಾಂಡ್ ಸೂಚನೆಯಾಗಿತ್ತು. ಅದರಂತೆ ಸಿಎಂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಂತೆ ಸಂಪುಟದಿಂದ ನನ್ನನ್ನು ಕೈ ಬಿಡಲಾಗಿದೆ. ಇದು ಪಕ್ಷದ ತೀರ್ಮಾನವಾಗಿದೆ. ಅದನ್ನು ಈ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು ಸಾಧುವಲ್ಲ ಎಂದು ಪ್ರತಿಕ್ರಿಯಿಸಿದರು.







