ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ

ಕೆ.ಎನ್.ರಾಜಣ್ಣ
ಬೆಂಗಳೂರು, ಆ.11: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಈ ಬೆಳವಣಿಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕೋರಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯ ಶಿಫಾರಸು ಅನ್ನು ಅಂಗೀಕರಿಸಿದ್ದಾರೆ.
ವಿವಾದಿತ ಹೇಳಿಕೆಗೆ ವಜಾ?: ಮತಗಳ್ಳತನದ ಬಗ್ಗೆ ಬೆಂಗಳೂರಿನಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಮತದಾರರ ಪಟ್ಟಿ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರಕಾರ ಅಧಿಕಾರದಲ್ಲಿ ಇರುವಾಗ ಮಾಡಿರುವುದು ಅಲ್ಲವೇ? ಆವಾಗ ಎಲ್ಲ ಏನು ಕಣ್ಮುಚ್ಚಿ ಕುಳಿತಿದ್ರಾ?’ ಎಂದು ಖಾರವಾಗಿ ಪ್ರಶ್ನಿಸಿದ್ದರು.
‘ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದ್ದು ಮಾತ್ರವಲ್ಲದೆ, ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಸಂಪುಟದಿಂದ ಏಕಾಏಕಿ ಕೆ.ಎನ್ ರಾಜಣ್ಣ ಅವರನ್ನು ವಜಾಗೊಳಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಕೆ.ಎನ್.ರಾಜಣ್ಣ ರಾಜಕೀಯ ಹಾದಿ: 1972ರಿಂದಲೂ ಕೆ.ಎನ್.ರಾಜಣ್ಣ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಹಲವು ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿದ್ದರು. ಕೆ.ಎನ್.ರಾಜಣ್ಣ ಅವರು 1998-2004ರ ಅವಧಿ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ತುಮಕೂರಿನ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಅನಂತರ, ಮಧುಗಿರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಗೆಲುವಿನ ನಗೆ ಬೀಗಿದ್ದರು. 2013ರ ಚುನಾವಣೆಯಲ್ಲೂ ಕಾಂಗ್ರೆಸ್ನ ಕೆ.ಎನ್.ರಾಜಣ್ಣ ಮಧುಗಿರಿಯಿಂದ ಸ್ಪರ್ಧಿಸಿ 75,086 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದರು. 2023ರಲ್ಲಿ ಮತ್ತೆ ಮಧುಗಿರಿ ಕ್ಷೇತ್ರದಿಂದ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಕಾರ್ಯದರ್ಶಿಗೆ ಸೂಚನೆ: ‘ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾ ಮಾಡುವ ಕುರಿತು ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ರಾಜಭವನದಿಂದ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಸೋಮವಾರ ರವಾನಿಸಲಾಗಿದೆ’ ಎಂದು ರಾಜ್ಯಪಾಲರ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ರಾಜೀನಾಮೆಯಲ್ಲ, ಸಂಪುಟದಿಂದ ವಜಾ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸೋಮವಾರ ಮಧ್ಯಾಹ್ನದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸರಕಾರದಿಂದ ರಾಜಣ್ಣ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ರಾಜಣ್ಣ ಅವರಿಂದ ರಾಜೀನಾಮೆ ಪಡೆಯದೇ ಸಚಿವ ಸಂಪುಟದಿಂದ ವಜಾ ಮಾಡಲಾಗಿರುವ ಬೆಳವಣಿಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
‘ರಾಹುಲ್ ಗಾಂಧಿಯ ಬೇಜವಾಬ್ದಾರಿಯುತ ಸುಳ್ಳು ಆರೋಪವನ್ನು ಒಪ್ಪದೇ, ಸತ್ಯವನ್ನು ಒಪ್ಪಿಕೊಂಡ ಸಹಕಾರಿ ಧುರೀಣ, ಸಚಿವ ಕೆ.ಎನ್.ರಾಜಣ್ಣ ಅವರ ರಾಜೀನಾಮೆ ಪಡೆದುಕೊಂಡ ಕಾಂಗ್ರೆಸ್, ಪಕ್ಷದಲ್ಲಿ ಸತ್ಯ ಹೇಳೋಕೆ ಅವಕಾಶ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ’
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
‘ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ನೀಡಲು ಕಾರಣವೇನು? ಅವರು ಎಷ್ಟು ದುಡ್ಡು ಹೊಡೆದಿದ್ದಾರೆ, ಆ ದುಡ್ಡು ಎಲ್ಲಿ, ಯಾರ ಮನೆಯಲ್ಲಿ ಇರಿಸಿದ್ದಾರೆ. ಸಚಿವರ ಮೇಲಿನ ಆಪಾದನೆ ಏನು?. ನಾಯಕತ್ವ ಬದಲಾವಣೆಯ ಕೂಗು ಎದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಗಟ್ಟಿಯಾಗಿದ್ದ ನಿಂತಿದ್ದ ಏಕೈಕ ವ್ಯಕ್ತಿ ರಾಜಣ್ಣ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಸದನದಲ್ಲಿ ಸಚಿವರಿಗೆ ನಿಗದಿಪಡಿಸಿರುವ ಸ್ಥಾನದಲ್ಲಿ ಅವರು ಹೇಗೆ ಆಸೀನರಾಗಿದ್ದಾರೆ ಎಂಬುದು ಗೊತ್ತಾಗಬೇಕು’
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ, ವಿಧಾನಸಭೆ
ಪಕ್ಷದ ತೀರ್ಮಾನ, ಪ್ರಶ್ನೆ ಮಾಡುವುದಿಲ್ಲ: ‘ಇದು ಕಾಂಗ್ರೆಸ್ ಪಕ್ಷದ, ಹೈಕಮಾಂಡ್ನ ತೀರ್ಮಾನವೂ ಆಗಿದೆ. ಇದನ್ನು ನಾನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಮ್ಮ ನಾಯಕರು. ಮತಗಳ್ಳತನ ಕುರಿತು ಹೋರಾಟ ಮಾಡುತ್ತಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ. ಆದರೆ, ಕೆಲ ವಿಚಾರಗಳಲ್ಲಿ ತಪ್ಪು ಗ್ರಹಿಕೆ ಉಂಟಾಗಿದ್ದು, ಈ ಬಗ್ಗೆ ಹೊಸದಿಲ್ಲಿಯಲ್ಲಿ ಹಿರಿಯ ಸಚಿವರೊಂದಿಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವೆ’
-ಕೆ.ಎನ್.ರಾಜಣ್ಣ, ಮಾಜಿ ಸಚಿವ







