ʼಸಿದ್ದರಾಮಯ್ಯ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿʼ : ಅಭಿಮಾನಿಗಳಿಗೆ ಕೆ.ಎನ್.ರಾಜಣ್ಣ ಪತ್ರ

ಕೆ.ಎನ್.ರಾಜಣ್ಣ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪಟ್ಟಣದಾದ್ಯಂತ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ರಾಜಣ್ಣ ಅವರನ್ನು ವಜಾ ಮಾಡಿರುವುದರಿಂದ ಅಸಮಾಧಾನಗೊಂಡಿರುವ ಯುವ ಕಾರ್ಯಕರ್ತನೋರ್ವ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಯುವಕನ್ನು ತಡೆದು ಸಮಾಧಾನಪಡಿಸಿದ್ದರು.
ಈ ಸಂಬಂಧ ಕೆ.ಎನ್.ರಾಜಣ್ಣ ಅವರು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿದ್ದಾರೆ
"ಆತ್ಮೀಯ ಹಾಗೂ ಅಭಿಮಾನಿ ಬಂಧುಗಳಲ್ಲಿ ನನ್ನದೊಂದು ಕೋರಿಕೆ. ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ರಾಜಕೀಯ ಬದಲಾವಣೆಗೂ ಎಂದೂ ದೃಢಿಗೆಟ್ಟವನಲ್ಲ, ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಾನು ಸಹ ನಿಮ್ಮನ್ನು ನನ್ನ ಕುಟುಂಬವೆಂದೇ ಭಾವಿಸಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ"
ಹಾಗಾಗಿ, ಯಾವುದೇ ತಪ್ಪು ನಿರ್ಧಾರ ಮಾಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ. ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ರವರ ಹಾದಿಯಲ್ಲೇ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.







