ಕೋಗಿಲು ಒತ್ತುವರಿ ತೆರವು ಪ್ರಕರಣ: 250ಕ್ಕೂ ಹೆಚ್ಚು ನಿವಾಸಿಗಳಿಂದ ಅರ್ಜಿ

ಬೆಂಗಳೂರು : ಕೋಗಿಲು ಪ್ರಕರಣದಲ್ಲಿ ಅಧಿಕಾರಿಗಳ ಪ್ರಕಾರ ನೆಲಸಮಗೊಳಿಸಿರುವ ಶೆಡ್‍ಗಳ ಸಂಖ್ಯೆ-167. ಆದರೆ, 250ಕ್ಕೂ ಹೆಚ್ಚು ನಿವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ನೆಲಸಮಗೊಂಡ ಒಂದೇ ಮನೆಯ ಇಬ್ಬರು ಮತ್ತು ಮೂವರಿಂದ ಅರ್ಜಿ ಸಲ್ಲಿಕೆಯಾಗಿದೆ. ಹಾಗಾಗಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್, ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೆಲಸಮಗೊಳಿಸಿದೆ. ಸೂರು ಕಳೆದುಕೊಂಡವರಿಗೆ ಮನೆ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಸಂಗ್ರಹಿಸಿದ್ದು, ಅವುಗಳ ನೈಜತೆಯನ್ನು ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕನ್ನಡಿಗರು ಮತ್ತು ಪರಭಾಷಿಕರು ಎಂಬ ಎರಡು ಪಟ್ಟಿಯನ್ನು ಅಧಿಕಾರಿಗಳು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಿದ್ದಾರೆ.
‘ಕೋಗಿಲು ಕ್ವಾರಿ ಪ್ರದೇಶದಲ್ಲಿ ಸರ್ವೆ ಮಾಡಲಾಗಿದೆ. ಮನೆ ನೀಡುವಂತೆ 250ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಜಿಬಿಎ, ಕಂದಾಯ ಇಲಾಖೆ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಶೇಕಡ 95ರಷ್ಟು ದಾಖಲೆಗಳು ಹೊಂದಾಣಿಕೆಯಾಗಿದೆ’ ಎಂದು ಯಲಹಂಕ ತಹಶೀಲ್ದಾರ್ ಶ್ರೇಯಸ್ ತಿಳಿಸಿದರು.







