ಕೆಪಿಸಿಸಿ ಅಧ್ಯಕ್ಷ ಸ್ಥಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?

Screengrab : x/@ANI
ಬೆಂಗಳೂರು : ‘ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ನೂತನ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವು ಸೇರಿದಂತೆ ನಾಳೆ(ಮೇ 31)ಯ ವೇಳೆಗೆ ಎಲ್ಲವೂ ನಿರ್ಧಾರವಾಗಲಿದೆ’ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಹೀಗಾಗಿಯೇ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣವಚನ ಸ್ವೀಕಾರ ಸಮಾರಂಭವು ಸೇರಿದಂತೆ ಇತರ ವಿಚಾರಗಳ ಕುರಿತು ಸಮಾಲೋಚನೆ ನಡೆಸಿರಬಹುದು’ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರಿನಂತೆ, ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ಕೇಳಿ ಬರುತ್ತಿದೆ. ಬಹುಶಃ ನಾಳೆಯೊಳಗೆ ಎಲ್ಲವೂ ಬಗೆಹರಿಯಲಿದೆ. ಹೈಕಮಾಂಡ್ ಎರಡು-ಮೂರು ಹೆಸರುಗಳನ್ನು ಪರಿಶೀಲಿಸಿ, ಸೂಕ್ತವಾದವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವ ಸಂಪುಟದಿಂದ ಹಿರಿಯರನ್ನು ಕೈಬಿಡುವ ಬಗ್ಗೆ ಏನು ಚರ್ಚೆ ನಡೆದಿದೆ ಎಂದು ಗೊತ್ತಿಲ್ಲ. ಆದರೆ ಸಂಪುಟಕ್ಕೆ ಹಳಬರು ಮತ್ತು ಹೊಸಬರು ಎರಡು ಆಯಾಮದಲ್ಲೂ ನೇಮಕವಾಗಬೇಕು. ಹೊಸಬರನ್ನೇ ಇಟ್ಟುಕೊಂಡು ಸರಕಾರ ನಡೆಸಲು ಆಗುವುದಿಲ್ಲ ಎಂದ ಅವರು, ಡಿಸಿಎಂ ಹುದ್ದೆಗಳು ಬೇಕೋ ಬೇಡವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಎಲ್ಲವೂ ಚರ್ಚೆಯ ಹಂತದಲ್ಲಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯನವರ ಉಪಾಹಾರ ಕೂಟದ ಬಳಿಕ ನಾನು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ನಿನ್ನೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ತಮಗೆ ಸಾಮರ್ಥ್ಯ ಇದೆ, ಸಂಪುಟದಲ್ಲಿ ಅವಕಾಶ ಕೊಡಿ ಎಂದು ಎಲ್ಲರೂ ಕೇಳುತ್ತಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.






