ಕೆಪಿಎಸ್ಸಿ ಭ್ರಷ್ಟಾಚಾರಗಳಿಗೆ ಎನ್‍ಡಿಎ ಮುಖಂಡರೇ ಪಿತಾಮಹರು : ಡಿ.ಕೆ.ಶಿವಕುಮಾರ್

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದಲ್ಲಿ ನಡೆದಿರುವ ಭ್ರಷ್ಟಾಚಾರಗಳಿಗೆ ಈ ಹಿಂದೆ ಆಡಳಿತ ನಡೆಸಿದ ಎನ್‍ಡಿಎ ಪಾಲುದಾರ ಪಕ್ಷಗಳ ಮುಖಂಡರುಗಳೇ ಪಿತಾಮಹರಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದವರು ಯಾರು? ಎಂಬುವುದು ಗೊತ್ತಿದೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದವರು ಯಾರೆಂಬುದು ಪರಿಶೀಲನೆಯಾಗಬೇಕು. ಒಟ್ಟಿನಲ್ಲಿ ಕೆಪಿಎಸ್ಸಿ ಹಗರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಎನ್‍ಡಿಎ ಮುಖಂಡರ ವಿರುದ್ಧ ಗೃಹ ಸಚಿವರ ಬಳಿ ಇರುವ ಮಾಹಿತಿಯನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಇನ್ನೂ, ಬಿಜೆಪಿ ಪಕ್ಷದ ಪಾದಯಾತ್ರೆ ನಿಜವಾದ ಹೋರಾಟವಲ್ಲ. ಬಿಜೆಪಿ ಸಂಘಟನೆಯೊಳಗಿನ ಬಿಕ್ಕಟ್ಟನ್ನು ಮುಚ್ಚಿಕೊಳ್ಳುವ ಪ್ರಯತ್ನ. ಅವರು ಪಾದಯಾತ್ರೆ ಮಾಡಲಿ. ಅದಕ್ಕೆ ನನ್ನ ಯಾತ್ರೆ ಏನು ಎಂಬುದನ್ನು ಸದ್ಯಕ್ಕೆ ಹೇಳುವುದಿಲ್ಲ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಬಿಜೆಪಿಗರು ಹೇಳಿದ್ದನ್ನು ಕೇಳಿಕೊಂಡು, ಅವರಿಗೆ ನೀಡಬೇಕಾದ ಗೌರವವನ್ನು ನೀಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಗೌರವವನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂದಾದರೆ, ಅವರ ರಾಜಕಾರಣ ಅವರು ಮಾಡಲಿ. ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದರು.
ಬಡವರು, ರೈತರು, ಕಾರ್ಮಿಕರು ಹಾಗೂ ಬರಗಾಲದಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿ. ಅಭಿವೃದ್ಧಿಯ ಕೆಲಸಗಳನ್ನು ಬದಿಗೊತ್ತಿ ರಾಜಕೀಯ ಆರೋಪ, ಪ್ರತ್ಯಾರೋಪಗಳಲ್ಲಿ ಸಮಯ ವ್ಯರ್ಥ ಮಾಡಲು ನಾವು ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಪಾದಯಾತ್ರೆಯೂ ಬಿಕ್ಕಟ್ಟು ಮುಚ್ಚಿಕೊಳ್ಳುವ ಪ್ರಯತ್ನ: ಕೆಪಿಎಸ್ಸಿ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಹೋರಾಟವಲ್ಲ. ಬದಲಿಗೆ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಚ್ಚಿಕೊಳ್ಳುವ ಪ್ರಯತ್ನ. ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ.ಅವರೊಂದಿಗೆ ಸಂಪರ್ಕ ಹೊಂದಿದ್ದವರು ಯಾರು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಹಿಂದೆ ಪತ್ರ ಬರೆದಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.






