‘ಕೆಪಿಎಸ್ಸಿ’ ಯುವಕರ ಕನಸನ್ನು ಹತ್ಯೆ ಮಾಡುವ ಕೇಂದ್ರವಾಗಿ ಮಾರ್ಪಾಡಾಗಿದೆ: ಸುನಿಲ್ ಕುಮಾರ್ ಆಕ್ರೋಶ

ಶಾಸಕ ಸುನಿಲ್ ಕುಮಾರ್
ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ) ಸರಕಾರಿ ನಿಯಂತ್ರಣದಲ್ಲಿ ಯುವಕರ ಕನಸನ್ನು ಹತ್ಯೆ ಮಾಡುವ ಕೇಂದ್ರವಾಗಿ ಮಾರ್ಪಾಡಾಗಿದೆ. ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಂಡು ನಾಗರಿಕ ಸೇವೆ ಸಲ್ಲಿಸುವ ಕನಸು ಕಾಣುತ್ತಿರುತ್ತಾರೆ. ಆದರೆ, ಸರಕಾರದ ಭ್ರಷ್ಟಾಚಾರದಿಂದ ಅವರ ಕನಸುಗಳು ಕಮರಿ ಹೋಗುತ್ತಿವೆ ಎಂದು ಬಿಜೆಪಿ ಸದಸ್ಯ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ವಿಧಾನಸಭೆಯಲ್ಲಿ ‘ರಾಜ್ಯ ಲೋಕಸೇವಾ ಆಯೋಗದಲ್ಲಿ ಪದೇ ಪದೇ ನಡೆಯುತ್ತಿರುವ ಅಕ್ರಮಗಳಿಂದಾಗಿ ಉದ್ಯೋಗದ ಕನಸು ಹೊತ್ತ ಯುವ ಜನಾಂಗಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ನಿಯಮ 69ರಡಿ ನಡೆದ ಸಾರ್ವಜನಿಕ ಮಹತ್ವದ ವಿಷಯ’ ಪ್ರಸ್ತಾವಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬರುವಂತಹ ಯುವಕರ ಕೈಗೆ ನಾವು ಮುಂದಿನ 30 ವರ್ಷಗಳ ರಾಜ್ಯದ, ಕಾರ್ಯಾಂಗದ ಭವಿಷ್ಯವನ್ನು ನೀಡುತ್ತೇವೆ. ಅಂತಹ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆದರೆ, ಆ ಸರಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಕೆಪಿಎಸ್ಸಿ ಅನ್ನೋದು ಒಂದು ನಿಗೂಢ ಸಂಸ್ಥೆ, ಪರೀಕ್ಷೆ ರಹಸ್ಯ, ಫಲಿತಾಂಶ ನಿಗೂಢವಾದದ್ದು. ಪ್ರತಿ ಬಾರಿ ಪರೀಕ್ಷೆಗಳು ನಡೆದಾಗಲೂ ಇಲ್ಲಿ ಕೋಟ್ಯಂತರ ರೂ.ಗಳ ವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನಗಳು ಮೂಡುತ್ತವೆ. ಕೆಪಿಎಸ್ಸಿ ಸುಧಾರಣೆ ಆಗಬೇಕು. ಇಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿ, ಯಾರನ್ನಾದರೂ ಹೊಣೆ ಮಾಡಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
ಎಇಇ, ಎಫ್ಡಿಎ, ಪಿಡಿಒಗಳ ಪರೀಕ್ಷೆಗಳಲ್ಲೂ ವಿವಿಧ ಆರೋಪಗಳು ಕೇಳಿ ಬಂದವು. ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶದ ಬಗ್ಗೆಯೂ ಅನುಮಾನಗಳು ಮೂಡಿವೆ. ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಾರೆ. ಒಂದೇ ಒಂದು ಆರೋಪ ಕೇಳಿ ಬರುವುದಿಲ್ಲ. ಕೇವಲ 5 ಸಾವಿರ ಜನ ಭಾಗವಹಿಸುವ ಈ ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿ ಬರುತ್ತವೆ ಎಂದು ಅವರು ತಿಳಿಸಿದರು.
384 ಜನರನ್ನು ಭರ್ತಿ ಮಾಡಲು ನಡೆದ ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಬರಲು ಮೂರು ವರ್ಷ ಆಯಿತು. ಇನ್ನು 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರಕಾರ ಘೋಷಿಸಿದೆ. ಈ ಹುದ್ದೆಗಳ ಭರ್ತಿಗೆ ಎಷ್ಟು ವರ್ಷ ಬೇಕಾಗಬಹುದು? ಕಳೆದ ನಾಲ್ಕು ವರ್ಷಗಳಲ್ಲಿ ಕೆಪಿಎಸ್ಸಿಯ ನಾಲ್ಕು ಕಾರ್ಯದರ್ಶಿಗಳು ಬದಲಾಗಿದ್ದಾರೆ ಯಾಕೆ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.
ಸರಕಾರಿ ಹುದ್ದೆಗಳು ಕೇವಲ ಪ್ರಭಾರಿಗಳು, ರಾಜಕಾರಣಿಗಳು, ಉಳ್ಳವರು, ಶ್ರೀಮಂತರಿಗೆ ಮಾತ್ರವೇ? ಎಂದು ಚರ್ಚೆಗಳು ಆಗುತ್ತಿವೆ. ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 11 ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿ ಕಾಣಿಸುತ್ತಾರೆ. ಒಂದೇ ಕುಂಟುಬದ ನಾಲ್ಕು ಮಂದಿ ಆಯ್ಕೆಯಾಗುತ್ತಾರೆ. ಉತ್ತರ ಪತ್ರಿಕೆ ಇದ್ದ ಬಂಡಲ್ ನ ಸೀಲ್ ಪರೀಕ್ಷೆ ಆರಂಭಕ್ಕೆ ಮುನ್ನವೆ ತೆಗೆಯಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದೂರು ನೀಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಕೆಪಿಎಸ್ಸಿ ಸುಧಾರಣೆಗೆ ಹೋಟ ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿ ನೀಡಿರುವ ಶಿಫಾರಸ್ಸುಗಳ ಪೈಕಿ ಎಷ್ಟು ಶಿಫಾರಸ್ಸುಗಳನ್ನು ಸರಕಾರ ಒಪ್ಪಿಕೊಂಡು ಅನುಷ್ಠಾನ ಮಾಡಿದೆ ಎಂದು ತಿಳಿಸಬೇಕು ಎಂದು ಸುನಿಲ್ ಕುಮಾರ್ ಹೇಳಿದರು.
ಬಿಜೆಪಿ ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ಕೆಪಿಎಸ್ಸಿ ಅನ್ನೋದು ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಅಲ್ಲ. ಅದರಲ್ಲಿ ಸರ್ವೀಸ್ ಕಾಣೆಯಾಗಿದೆ. ಉದ್ಯೋಗ ಮೂಲಭೂತ ಹಕ್ಕು. ಆದರೆ, ಇಂದು ಯುವಕರಿಗೆ ಆ ಮೂಲಭೂತ ಹಕ್ಕಿನಿಂದ ವಂಚಿಸಲಾಗುತ್ತಿದೆ. ಕೆಪಿಎಸ್ಸಿ ಕಚೇರಿಯ ಹೆಸರನ್ನು ಉದ್ಯೋಗ ಸೌಧ ಬದಲು, ನಿರುದ್ಯೋಗ ಸೌಧ ಎಂದು ಬದಲಾಯಿಸಬೇಕಿದೆ ಎಂದು ಹೇಳಿದರು.
ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟ ಮಾಡುವುದರಲ್ಲಿನ ವಿಳಂಬದಿಂದಾಗಿ ಯುವಕರು ಹತಾಶರಾಗುತ್ತಾರೆ. ಸರಕಾರವು ‘ಶಾಶ್ವತ ಪರೀಕ್ಷಾ ಮೌಲ್ಯಮಾಪಕರ ಮಂಡಳಿ’ ರಚನೆ ಮಾಡಿ, ಕೆಪಿಎಸ್ಸಿ ನಡೆಸುವ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಈ ಮಂಡಳಿಯಿಂದಲೆ ತಜ್ಞರನ್ನು ಕಳುಹಿಸುವ ವ್ಯವಸ್ಥೆ ಮಾಡಬಹುದೆ? ಎಂದು ಅವರು ಪ್ರಶ್ನಿಸಿದರು.
ಕಾನೂನು, ಶಿಕ್ಷೆಯ ಭಯವೂ ಇಲ್ಲವಲ್ಲ: ಪ್ರಿಯಾಂಕ್ ಖರ್ಗೆ
ಸರಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿದರೆ 10 ಕೋಟಿ ರೂ.ವರೆಗೆ ದಂಡ, ಜೈಲು ಶಿಕ್ಷೆ ಹಾಗೂ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕುವ ಕಾಯ್ದೆಯನ್ನು ಇದೇ ಸದನದಲ್ಲಿ ಅಂಗೀಕರಿಸಲಾಗಿದೆ. ಆದರೂ, ಈ ಅಕ್ರಮಗಳನ್ನು ನಡೆಸುವವರಿಗೆ ಕಾನೂನು, ಶಿಕ್ಷೆಯ ಭಯ ಇಲ್ಲದಂತಾಗಿದೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಕೆಪಿಎಸ್ಸಿ ಬದಲು ಕೆಇಎ ಪರೀಕ್ಷೆ ನಡೆಸಿ ನೇಮಕಾತಿ ನಡೆದಿದೆ. ಯಾವುದೆ ಆರೋಪಗಳು ಇಲ್ಲ. ಕೆಪಿಎಸ್ಸಿ ರದ್ದು ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ 7-8ರಷ್ಟಿದೆ. ಆದರೆ, ನಮ್ಮ ರಾಜ್ಯದಲ್ಲಿ ಹತ್ತಾರು ಜನರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಇಷ್ಟೊಂದು ಸದಸ್ಯರ ಅಗತ್ಯವಿದೆ. ಕೆಪಿಎಸ್ಸಿಯಲ್ಲಿ ಹೆಗ್ಗಣಗಳ ರೀತಿ ಸದಸ್ಯರು ಹೆಚ್ಚಾಗುತ್ತಾ ಹೋಗುತ್ತಿದ್ದಾರೆ. ಪಾಲುಗಳನ್ನು ಹಂಚಿಕೊಳ್ಳಲು ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆಯೇ? ಕೆಪಿಎಸ್ಸಿಯಲ್ಲಿ ಸುಧಾರಣೆ ತರದೆ ಹೋದರೆ ನಾವು ಇಲ್ಲಿ ಎಷ್ಟೇ ಚರ್ಚೆ ಮಾಡಿದರೂ ಪ್ರಯೋಜನವಿಲ್ಲ.
-ಆರ್.ಅಶೋಕ್, ವಿಪಕ್ಷ ನಾಯಕ







