ಕೆಪಿಎಸ್ಸಿ ಸುಧಾರಣೆಗೆ ಸರ್ವ ಪಕ್ಷದ ಸದನ ಸಮಿತಿ ರಚನೆ : ಸಚಿವ ಕೃಷ್ಣಭೈರೇಗೌಡ

ಬೆಂಗಳೂರು : ಕೆಪಿಎಸ್ಸಿ ಮೂಲಕ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಗಳು ಯಾವುದೇ ವಂಚನೆಗಳಿಲ್ಲದೆ ನಡೆಯುವಂತೆ ಮಾಡುವ ಸಲುವಾಗಿ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಿ, ಸಮಿತಿಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಕೆಪಿಎಸ್ಸಿಗೆ ಸುಧಾರಣೆ ತರಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿ ಇತ್ತೀಚೆಗೆ ನಡೆದ ಗೆಜೆಟೆಡ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗಿರುವುದರಿಂದ ಅಕ್ರಮ ನಡೆದಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಲಿದೆ. ಮೊದಲಿನಿಂದಲೂ ಇಂತಹ ಘಟನೆಗಳು ಜರುಗುತ್ತಲೇ ಇರುವುದರಿಂದ ಕೆಪಿಎಸ್ಸಿಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಬದಲಾವಣೆ ತರಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಸಚಿವರು, ಈ ವಿಚಾರವಾಗಿ ಪಕ್ಷಾತೀತವಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಉತ್ತಮ ಗುಣಮಟ್ಟದ ಚರ್ಚೆಯಾಗಿರುವುದರಿಂದ ಕೆಪಿಎಸ್ಸಿ ಸಂಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಎಲ್ಲರೂ ತಮ್ಮ ಸಲಹೆಗಳನ್ನು ನೀಡುವ ಸಲುವಾಗಿ ಕೂಡಲೇ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಲಾಗುವುದು. ಸದನ ಸಮಿತಿಯ ಸಭೆಯಲ್ಲಿ ನೀವು ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು ಕೆಪಿಎಸ್ಸಿಯ ಕಾರ್ಯವೈಖರಿಯಲ್ಲಿ ಸುಧಾರಣೆ ತರಲಾಗುವುದು. ಸಮಿತಿಯಿಂದ ಮುಂದಿನ ಅಧಿವೇಶನದ ಒಳಗೆ ವರದಿಯನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೆ ತಾವು ಕೃಷಿ ಸಚಿವರಾಗಿದ್ದಾಗ 120 ಮಂದಿ ಕೃಷಿ ಅಧಿಕಾರಿಗಳ ನೇಮಕಾತಿಯನ್ನು ಕೆಪಿಎಸ್ಸಿ ಮೂಲಕ ಹಿಂಪಡೆದು ಕೆಇಎ ಮೂಲಕ ಒಂದೂ ದೂರು ಬಾರದ ರೀತಿಯಲ್ಲಿ ಪಾರದರ್ಶಕವಾಗಿ ನೇಮಕಾತಿಯನ್ನು ಮಾಡಲಾಗಿತ್ತು. ಈಗ ಕಂದಾಯ ಸಚಿವರಾಗಿದ್ದು, ಕಳೆದ ವರ್ಷದಲ್ಲಿಯೇ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಕೆಇಎ ಮೂಲಕವೇ ಒಂದೂ ವಿವಾದಗಳಿಲ್ಲದಂತೆ ನೇಮಕಾತಿಯನ್ನು ಮಾಡಿದ್ದೇವೆ. ಹಾಗಾಗಿ ನಾನೇ ಕೆಪಿಎಸ್ಸಿ ಬಿಟ್ಟು ಕೆಇಎ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿರುವುದು ನನಗೂ ಕೆಪಿಎಸ್ಸಿಯ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಈಗ ಕೆಪಿಎಸ್ಸಿ ಬಗ್ಗೆ ನಾನೇ ಉತ್ತರ ನೀಡುವಾಗ ನನಗೆ ಜಿಜ್ಞಾಸೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಕ್ರಮ ನಡೆದಿದೆ ಎಂದು ಹೇಳದ ಪರೀಕ್ಷಾ ಕೊಠಡಿಯಲ್ಲಿರುವ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಲ್ಲಿ ಯಾರೂ ಒಂದೇ ಕುಟುಂಬದವರು ಇಲ್ಲ. ಆದರೂ ಕೆಪಿಎಸ್ಸಿ ಕಾರ್ಯವೈಖರಿ ಮೇಲೆ ದೂರುಗಳು ಬರುತ್ತಲೇ ಇರುವುದರಿಂದ ಅದರ ಸುಧಾರಣೆಗೆ ಸರಕಾರ ಖಂಡಿತವಾಗಿ ಕ್ರಮವಹಿಸಲಿದೆ ಎಂದು ಸಚಿವರು ಹೇಳಿದರು.







