KPSC ನೇಮಕಾತಿ ಅಕ್ರಮ; ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಮನೆ ಮೇಲೆ ಈ.ಡಿ ದಾಳಿ

ಬೆಂಗಳೂರು : ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಈ.ಡಿ ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸಂಜಯನಗರದ ಶಿವಶಂಕರಪ್ಪ ಸಾಹುಕಾರ್ ಮನೆಗೆ ಪ್ರತ್ಯೇಕ ವಾಹನಗಳಲ್ಲಿ ಬಂದಿರುವ ಈ.ಡಿ ಅಧಿಕಾರಿಗಳು ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆಯೂ ಶಿವಶಂಕರಪ್ಪ ಸಾಹುಕಾರ್ ಮನೆ ಮೇಲೆ ಈ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈಗ ಮತ್ತೊಮ್ಮೆಯೂ ಈ.ಡಿ ದಾಳಿ ಮಾಡಿರುವುದು ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇತ್ತ ಶಿವಶಂಕರಪ್ಪ ಸಾಹುಕಾರ್ ಜೊತೆಗೆ ಕೆಪಿಎಸ್ ಸಿ ಸದಸ್ಯೆ ಗೀತಾ ಮನೆಯ ಮೇಲೂ ಈ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಶಿವಶಂಕರಪ್ಪ ಸಾಹುಕಾರ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ನೇಮಕಾತಿ ಅಕ್ರಮಗಳು ನಡೆದಿವೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಜೊತೆಗೆ ಈ.ಡಿ ಎರಡನೇ ಬಾರಿ ದಾಳಿಯನ್ನು ಮಾಡಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಶಿವಶಂಕರಪ್ಪ ಸಾಹುಕಾರ್ ಬಂಧನ ಆಗಿಲ್ಲ.




