ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಜೈಲಿನಲ್ಲಿರುವ ಜ್ಞಾನೇಂದ್ರ ಕುಮಾರ್, ಕನ್ನಾಳೆಯನ್ನು ವಶಕ್ಕೆ ಪಡೆದ ED

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಹಣದ ವಹಿವಾಟು ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಈಡಿ) ತನಿಖೆ ನಡೆಸುತ್ತಿದ್ದು, ಈಡಿ ಅಧಿಕಾರಿಗಳು ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಜೈಲಿನಲ್ಲೇ ವಶಕ್ಕೆ ಪಡೆದಿದ್ದಾರೆ.
ಇಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವ ಈಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.
ಆರೋಪಿಗಳಾದ ಬಸವರಾಜ್ ಕನ್ನಾಳೆ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಅಕ್ರಮವಾಗಿ ಸಂಗ್ರಹಿಸಿದ ಹಣದಲ್ಲಿ ಆಭರಣ, ವಾಹನ ಹಾಗೂ ಫ್ಲ್ಯಾಟ್ ಖರೀದಿಸಿದ್ದಾರೆ. ಆರೋಪಿಗಳನ್ನು ಸಿಐಡಿ ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.




