ʼನನಗೆ ಕಂದಾಯ ಇಲಾಖೆ ಜವಾಬ್ದಾರಿಯನ್ನೇ ಕೊಡಿ’ : ವರಿಷ್ಠರಿಗೆ ಸಚಿವ ಕೃಷ್ಣಭೈರೇಗೌಡ ಮನವಿ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಬಿಡಿಎ, ಬಿಎಂಆರ್‌ಡಿಎ ಹೊರತುಪಡಿಸಿದ ‘ಬೆಂಗಳೂರು ನಗರಾಭಿವೃದ್ಧಿ ಖಾತೆ’ಯನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಳ್ಳಲಿ. ‘ನನಗೆ ಕಂದಾಯ ಇಲಾಖೆಯ ಹೊಣೆ ನೀಡಲಿ’ ಎಂದು ಸಚಿವ ಕೃಷ್ಣ ಭೈರೇಗೌಡ ಕೋರಿದ್ದಾರೆ ಎನ್ನಲಾಗಿದೆ.
ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿರುವ ಸಚಿವ ಕೃಷ್ಣ ಭೈರೇಗೌಡ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವರಿಷ್ಠರನ್ನು ಭೇಟಿ ಮಾಡಿ ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿಸಲು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ‘ಬಿಡಿಎ ಮತ್ತು ಬಿಎಂಆರ್‌ಡಿಎ ಸೇರ್ಪಡೆ ಮಾಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿದರೆ ಮಾತ್ರ ನಾನು ಅಧಿಕಾರ ವಹಿಸಿಕೊಳ್ಳುತ್ತೇನೆ’ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಸಂಪುಟದಲ್ಲಿ ಖಾಲಿ ಇರುವ ಇನ್ನೂ 20 ಸಚಿವ ಸ್ಥಾನಗಳಿಗೆ 30ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು ಸಂಪುಟ ವಿಸ್ತರಣೆ ಪಕ್ಷಕ್ಕೆ ತಲೆ ನೋವಾಗಿದೆ. ಹೀಗಾಗಿ ಆದಷ್ಟು ಬೇಗ ಸಂಪುಟ ವಿಸ್ತರಿಸುವ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ವರಿಷ್ಠರ ಜತೆ ಚರ್ಚಿಸಿ, ಈ ತಿಂಗಳ ಅಂತ್ಯಕ್ಕೆ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಸೇರ್ಪಡೆಗೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರುಗಳ ದಂಡು ದಿಲ್ಲಿಯಲ್ಲಿ ಬೀಡುಬಿಟ್ಟಿದೆ. ಪಿ.ಎಂ.ನರೇಂದ್ರಸ್ವಾಮಿ, ಅಶೋಕ್ ಪಟ್ಟಣ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ನಿನ್ನೆ ರಾತ್ರಿಯೇ ಹೊಸದಿಲ್ಲಿಗೆ ತೆರಳಿದ್ದು, ಎರಡನೆ ಹಂತದ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನವನ್ನು ಗಿಟ್ಟಿಸಲು ತೀವ್ರ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗಿದೆ.






