ಫುಟ್ಪಾತ್ನಲ್ಲಿ ವಾಹನ ಚಲಾಯಿಸುವವರಿಗೆ ದಂಡದ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸಿ : ಸಾರಿಗೆ ಸಚಿವರಿಗೆ ಕೃಷ್ಣಬೈರೇಗೌಡ ಪತ್ರ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ದಂಡದ ಮೊತ್ತವನ್ನು 5000 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬುಧವಾರ ಬೆಂಗಳೂರು ನಗರ ಸಂಚಾರ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸಾರ್ವಜನಿಕರ ನಡೆಯುವ ಹಕ್ಕನ್ನು ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕೆಲಸಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ಮೋಟಾರು ವಾಹನಗಳನ್ನು ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದೂ ಸಾಧ್ಯವಿಲ್ಲ ಎಂದು ಕೃಷ್ಣಬೈರೇಗೌಡ ಬೇಸರ ಹೊರಹಾಕಿದರು.
ವಾಹನ ಸವಾರರು ಯಾವುದೇ ಭಯ ಇಲ್ಲದೆ ಒತ್ತುವರಿ ತೆರವಾಗಿರುವ ಪಾದಾಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಕೃಷ್ಣಬೈರೇಗೌಡ ಒತ್ತಾಯಿಸಿದ್ದಾರೆ.
ಅಲ್ಲದೆ, ದಂಡದ ಮೊತ್ತ ಅಧಿಕವಾದರೆ ಮಾತ್ರ ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯ. ಹೀಗಾಗಿ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ 500 ರೂ. ದಂಡವನ್ನು 5000 ರೂ.ಗೆ ಏರಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಈ ನಿಯಮವನ್ನು ಜಾರಿಗೊಳಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳನ್ನಾದರೂ ಪಾಲಿಸಿ ಎಂದು ಕೃಷ್ಣಬೈರೇಗೌಡ ಅಧಿಕಾರಿಗಳನ್ನು ಒತ್ತಾಯಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪರ್ಯಾಯ ಪಾರ್ಕಿಂಗ್ ಅಥವಾ ಒನ್-ಸೈಡ್ ಪಾರ್ಕಿಂಗ್ ಎಂಬ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ, ವಾಹನ ಸವಾರರು ಈ ನಿಯಮವನ್ನು ಪಾಲಿಸುತ್ತಿಲ್ಲ. ತಿಂಗಳ ಎಲ್ಲಾ ದಿನಗಳಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಪರಿಣಾಮ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮವನ್ನು ಪಾಲಿಸಲು ಇರುವ ಸಮಸ್ಯೆಯಾದರೂ ಏನು? ಎಂದು ಕೃಷ್ಣಬೈರೇಗೌಡ ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.
ಚಾಲ್ತಿಯಲ್ಲಿರುವ ನಿಯಮ ಪಾಲನೆಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬೇಕಿಲ್ಲ. ಇನ್ನಾದರೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ. ಪ್ರತಿದಿನ ರಸ್ತೆಯ ಒಂದು ಬದಿಯಲ್ಲಿ ಕನಿಷ್ಟ 7 ರಿಂದ 8 ಅಡಿ ಜಾಗ ಉಳಿಯಲಿದೆ. ವಾಹನ ಸವಾರರಿಗೂ ಇದರಿಂದ ಅನುಕೂಲವಾಗಲಿದ್ದು, ವಾಹನ ದಟ್ಟಣೆಯನ್ನು ಒಂದು ಹಂತಕ್ಕೆ ನಿಯಂತ್ರಿಸಬಹುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಜನರಿಗೆ ಅರಿವು ಮೂಡಿಸದೆ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಲಕ್ಷಾಂತರ ಕೋಟಿ ಹಣ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ವಾಹನ ನಿಲುಗಡೆ ನಿಯಮಗಳ ಬಗ್ಗೆ ಮೊದಲು ಜನರಲ್ಲಿ ಅರಿವು ಮೂಡಿಸಿ. ನಗರದ ಮುಖ್ಯರಸ್ತೆಗಳಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸಭೆಯಲ್ಲಿ ಕೃಷ್ಣಬೈರೇಗೌಡ ತಾಕೀತು ಮಾಡಿದರು.
ಸಭೆಯಲ್ಲಿ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಜಿಬಿಎ ಅಪರ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟಾ ಚಲಪತಿ, ನವೀನ್ ಕುಮಾರ್ ರಾಜು, ಮುಖ್ಯ ಇಂಜಿನಿಯರ್ಗಳು, ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಗ್ನಲ್ಗಳಲ್ಲಿ ಬಸ್ ನಿಲ್ದಾಣಕ್ಕೆ ಅವಕಾಶವಿಲ್ಲ: ‘ಸಿಗ್ನಲ್ಗಳ ಬಳಿ ವಾಹನ ನಿಲುಗಡೆಗೊಳಿಸುವುದರಿಂದಲೂ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿದಂತೆ ಯಾವುದೇ ವಾಹನಗಳನ್ನೂ ಅನಗತ್ಯವಾಗಿ ಸಿಗ್ನಲ್ಗಳ ಬಳಿ ನಿಲ್ಲಿಸಲು ಅವಕಾಶ ನೀಡಬಾರದು. ಸಿಗ್ನಲ್ಗಳಿಂದ 75 ಮೀಟರ್ ಹಾಗೂ ಜಂಕ್ಷನ್ಗಳಿಂದ 50 ಅಂತರದಲ್ಲಿ ಯಾವುದೇ ಬಸ್ ನಿಲ್ದಾಣಗಳೂ ಇರುವಂತಿಲ್ಲ. ಬಸ್ ನಿಲ್ದಾಣಗಳು ಇದ್ದಲ್ಲಿ ಮೊದಲು ಸ್ಥಳಾಂತರಿಸಿ’ ಎಂದು ಸಭೆಯಲ್ಲಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.






