ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ಸಂಸ್ಥೆಗಳಿಗೆ 667 ಪ್ರಶಸ್ತಿಗಳ ಗರಿ; ‘ಶಕ್ತಿ ಯೋಜನೆ’ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆ

ಬೆಂಗಳೂರು, ಅ.17: ರಾಜ್ಯ ಸರಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳಾ ಟಿಕೆಟ್ ಉಚಿತ ಪ್ರಯಾಣಕ್ಕಾಗಿ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 1997ರಿಂದ 2025ರ ಸೆಪ್ಟಂಬರ್ ವರೆಗೆ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಎರಡು ವಿಶ್ವ ದಾಖಲೆಗಳಿಗೆ ಸೇರ್ಪಡೆಯಾಗಿದೆ.
ಈಗಾಗಲೇ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿತ್ತು.
1997ರಿಂದ 2025ರ ಅಕ್ಟೋಬರ್ ವರೆಗೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಒಟ್ಟು 667 ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅದರಲ್ಲಿ ಕೆಎಸ್‍ಆರ್‌ಟಿಸಿ ಸಂಸ್ಥೆಯೊಂದೇ 464 ಪ್ರಶಸ್ತಿಗಳನ್ನು ಪಡೆದಿದ್ದು, ಅದಕ್ಕಾಗಿ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದ 2013ರಿಂದ 2017ರ ಆಗಸ್ಟ್ ವರೆಗೆ 204 ಪ್ರಶಸ್ತಿಗಳು, 2023ರ ಜೂನ್‍ನಿಂದ 2025ರ ಅಕ್ಟೋಬರ್ ವರೆಗೆ 218 ಪ್ರಶಸ್ತಿ ಸೇರಿ ಒಟ್ಟು 422 ಪ್ರಶಸ್ತಿಗಳು ಲಭಿಸಿವೆ.
ಕೆಎಸ್ಸಾರ್ಟಿಸಿಗೆ 2013ರಿಂದ 2017ರ ಆಗಸ್ಟ್ ವರೆಗೆ 142, 2023ರ ಜೂನ್‍ನಿಂದ 2025ರ ಅಕ್ಟೋಬರ್ ವರೆಗೆ 188 ಪ್ರಶಸಿಗಳು, ಬಿಎಂಟಿಸಿಗೆ 2013ರಿಂದ 2017ರ ಆಗಸ್ಟ್ ವರೆಗೆ 44, 2023ರ ಜೂನ್‍ನಿಂದ 2025ರ ಅಕ್ಟೋಬರ್ ವರೆಗೆ 22 ಪ್ರಶಸ್ತಿಗಳು ಬಂದಿವೆ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 2013ರಿಂದ 2017ರ ಆಗಸ್ಟ್ ವರೆಗೆ 11, 2023ರ ಜೂನ್‍ನಿಂದ 2025ರ ಅಕ್ಟೋಬರ್ ವರೆಗೆ 6 ಪ್ರಶಸ್ತಿಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2013ರಿಂದ 2017ರ ಆಗಸ್ಟ್ ವರೆಗೆ 7 ಹಾಗೂ 2023ರ ಜೂನ್‍ನಿಂದ 2025ರ ಅಕ್ಟೋಬರ್ ವರೆಗೆ 2 ಪ್ರಶಸ್ತಿಗಳು ಬಂದಿವೆ ಎಂದು ಪ್ರಕಟನೆ ತಿಳಿಸಿದೆ.







