ಮೇ 20ರಂದು ಸಾರಿಗೆ ಮುಷ್ಕರ ನಿಲ್ಲದು: ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 26 ತಿಂಗಳ ವೇತನ ಬಾಕಿ ಹಣ 1,272 ಕೋಟಿ ರೂ.ಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿರುವ ಮೇ 20ರ ಮುಷ್ಕರ ಯಾವುದೇ ಕಾರಣಕ್ಕೂ ನಿಲ್ಲದು’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಎಚ್ಚರಿಸಿದೆ.
ಸೋಮವಾರ ಕಾರ್ಮಿಕ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಂಧಾನ ಸಭೆ ನಡೆಸಿದ್ದು, ಸಭೆ ವಿಫಲವಾಗಿದೆ. ಸರಕಾರದ ಮನವೊಲಿಕೆ ಪ್ರಯತ್ನಕ್ಕೆ ನೌಕರರು ಸಮ್ಮತಿಸಿಲ್ಲ. ಅಲ್ಲದೆ, ಸಾರಿಗೆ ಸಚಿವರು ಅಥವಾ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಲಿಖಿತ ಭರವಸೆ ನೀಡಿದರೆ ಮಾತ್ರವೇ ಮುಷ್ಕರ ಹಿಂಪಡೆಯಲಾಗುವುದು ಎಂದು ನೌಕರರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್, ‘ಸರಕಾರ ಮುಷ್ಕರವನ್ನು ಹತ್ತಿಕ್ಕುವ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ. ಕಾರ್ಮಿಕರನ್ನು ಸದೆಬಡಿಯುವ ಪ್ರಯತ್ನ ನಾಗರಿಕ ಸರಕಾರಕ್ಕೆ ಶೋಭೆಯಲ್ಲ. ನಾವು ಯಾವುದೇ ಕಾರಣಕ್ಕೂ ಮೇ 20ರ ಮುಷ್ಕರವನ್ನು ನಿಲ್ಲಿಸುವುದಿಲ್ಲ. ಕೆಲವೆಡೆ ಶೇ.12.5ರಷ್ಟು ವೇತನ ಹೆಚ್ಚಳ ನೌಕರರ ಒಪ್ಪಿಗೆ ಇದೆ ಎಂದು ಬಲವಂತವಾಗಿ ಬರೆಸಿಕೊಳ್ಳುವ ಪ್ರಯತ್ನ ನಡೆಸಿರುವುದ ಅಕ್ಷಮ್ಯ ಎಂದು ಆಕ್ಷೇಪಿಸಿದ್ದಾರೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರಕಾರ ಸಾರಿಗೆ ನೌಕರರಿಗೆ ವೇತನ, ಸೌಲಭ್ಯಗಳನ್ನು ನೀಡಲು ಸತಾಯಿಸುವುದು ಒಳ್ಳೆಯದಲ್ಲ. ನೌಕರರಿಗೆ ನ್ಯಾಯಯುತವಾಗಿ ವೇತನ ಬಾಕಿ ನೀಡುವುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ನಿಲ್ಲದು ಎಂದು ಜ್ಯೋತಿ ಎಚ್ಚರಿಕೆ ನೀಡಿದರು.
ಕರ್ತವ್ಯಕ್ಕೆ ಗೈರು ಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ: ಮೇ 20ರಂದು ಮುಷ್ಕರದ ದಿನಗಳಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರಿಗೆ ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ (ನೋ ವರ್ಕ್ ನೋ ಪೇ) ಎಂಬ ತತ್ವದನ್ವಯ ವೇತನ ಕಡಿತ ಹಾಗೂ ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರು ಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ-2013ರ ಅನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುಂತಿಲ್ಲ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದ್ದು, ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ನಿಯಮಗಳನ್ವಯ ‘ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ’ಯ ನೌಕರರ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ರಾಜೀ ಸಂಧಾನದಲ್ಲಿರುವಾಗ ನೌಕರರು ಮುಷ್ಕರ ಹೂಡುವಂತಿಲ್ಲ ಎಂದು ಹೇಳಿದ್ದಾರೆ.
ನಿಗಮದ ನೌಕರರು ಯಾವುದೇ ಕಾರಣಕ್ಕೂ ಮೇ 20ರಿಂದ ಉದ್ದೇಶಿತ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು. ಮೇ 20ರಿಂದ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಷ್ಕರದ ದಿನಗಳಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ, ಘಟಕವಾರು, ವರ್ಗಾವಾರು ಸಿದ್ಧಪಡಿಸಿ, ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ತ್ವದನ್ವಯ ವೇತನ ಕಡಿತಗೊಳಿಸುವುದು. ಅಲ್ಲದೇ, ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರುತ್ತಿದೆ. ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಮುಷ್ಕರದಲ್ಲಿ ರಾಜ್ಯ ಕೆಎಸ್ಸಾರ್ಟಿಸಿ ಎಸ್ಸಿ-ಎಸ್ಟಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಳ್ಳುವುದಿಲ್ಲ’
-ವೆಂಕಟರವಣಪ್ಪ ಪ್ರಧಾನ ಕಾರ್ಯದರ್ಶಿ ಕೆಎಸ್ಸಾರ್ಟಿಸಿ ಎಸ್ಸಿ-ಎಸ್ಟಿ ನೌಕರರ ಸಂಘ






