KSRTC ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಇದೀಗ ಬಸ್ ನಲ್ಲಿ ಸಾಗಿಸುವ ಲಗೇಜ್ ಶುಲ್ಕವನ್ನು ಪರಿಷ್ಕರಿಸಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.
ದುಪ್ಪಟ್ಟು ಏರಿಕೆ: ಬಸ್ ಪ್ರಯಾಣ ದರಗಳ ಏರಿಕೆಯ ಬೆನ್ನಲ್ಲೇ ಕೆಎಸ್ಸಾರ್ಟಿಸಿ ಲಗೇಜ್ ಸಾಗಣೆ ಶುಲ್ಕವನ್ನೂ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೊಸ ಪರಿಷ್ಕೃತ ದರ ಈಗಾಗಲೇ ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ದೂರದ ಊರುಗಳಿಗೆ ಪ್ರಯಾಣಿಸುವ ವೇಳೆ ಬ್ಯಾಗ್ ಅಥವಾ ಹೆಚ್ಚಿನ ಸಾಮಗ್ರಿಗಳನ್ನು ಕೊಂಡೊಯ್ಯುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
ಲಗೇಜ್ ಸಾಗಣೆಗೆ ಇರುವ ಮಿತಿಯೇನು?
ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸಾರಿಗೆ ನಿಗಮವು ಕೆಲವು ವಿನಾಯಿತಿಗಳನ್ನು ಕಲ್ಪಿಸಿದೆ. ಅದರನ್ವಯ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 10 ಕೆ.ಜಿ.ವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ, 20 ಕೆ.ಜಿ.ವರೆಗಿನ ಭಾರವಾದ ಸಾಮಗ್ರಿಗಳಿಗೂ ಉಚಿತ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ.
ಆದರೆ, ಈ ನಿಗದಿತ ಮಿತಿಗಿಂತ ಹೆಚ್ಚಿನ ತೂಕ ಅಥವಾ ಅಳತೆ ಹೊಂದಿರುವ ಲಗೇಜ್ಗಳಿಗೆ ಮಾತ್ರ ಹೊಸ ನಿಯಮದಡಿ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.
ಹೊಸ ಲಗೇಜ್ ದರ ಪಟ್ಟಿ:
ಸಾರಿಗೆ ನಿಗಮವು ದೂರದ ಸ್ಟೇಜ್ಗಳ ಆಧಾರದ ಮೇಲೆ ಲಗೇಜ್ ಶುಲ್ಕವನ್ನು,ಮೊದಲ 5 ಸ್ಟೇಜ್ಗಳಿಗೆ ಹಳೆಯ ದರ 6 ರೂ. ಇದ್ದು, ಅದನ್ನು ಈಗ 10 ರೂ.ಗೆ ಹೆಚ್ಚಿಸಲಾಗಿದೆ.
6 ರಿಂದ 10 ಸ್ಟೇಜ್ವರೆಗಿನ ಪ್ರಯಾಣಕ್ಕೆ ಹಳೆ ದರ 10 ರೂ.ಇದ್ದು, ಇದನ್ನು 15 ರೂ.ಗೆ ಏರಿಸಲಾಗಿದೆ.
11 ರಿಂದ 15 ಸ್ಟೇಜ್ಗಳವರೆಗೆ ಹಳೆ ದರ 20 ರೂಪಾಯಿ ಇದ್ದು, ಈಗ ಅದನ್ನು 25 ರೂಪಾಯಿಗೆ ಪರಿಷ್ಕರಿಸಲಾಗಿದೆ.
'ಕಿತ್ಕೊಂಡು ತಿನ್ನೋ ಕಿತ್ತೋದ್ ಕಾಂಗ್ರೆಸ್ ಸರ್ಕಾರದಿಂದ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಮತ್ತೊಂದು ಉಡುಗೊರೆ' ಎಂದು ಪ್ರತಿಪಕ್ಷ ಬಿಜೆಪಿ ಎಕ್ಸ್ ನಲ್ಲಿ ಸಾರಿಗೆ ಬಸ್ ಗಳಲ್ಲಿನ ಲಗೇಜ್ ದರ ಏರಿಕೆಗೆ ಆಕ್ಷೇಪಿಸಿದೆ.






