ಹೈಕಮಾಂಡ್ ಒಪ್ಪಿದರೆ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಸಿದ್ಧ: ಕುಮಾರ ಬಂಗಾರಪ್ಪ

ಕುಮಾರ ಬಂಗಾರಪ್ಪ
ಬೆಂಗಳೂರು : ಹೈಕಮಾಂಡ್ ನನ್ನನ್ನು ಪರಿಗಣಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.
ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದರಲ್ಲಿ ಬಿಜೆಪಿ ಸ್ವಲ್ಪ ಹಿಂದಿದೆ. ಇದು ಕಾಂಗ್ರೆಸ್ಗೆ ಅನುಕೂಲವಾಗಿದೆ. ಹಿಂದುಳಿದ ಮತ್ತು ದಲಿತರಿಗೆ ಅವಕಾಶ ಕೊಡಬೇಕು. ಕುಮಾರ ಬಂಗಾರಪ್ಪ ಅಂತ ಅಲ್ಲ, ಯಾರೇ ಹಿಂದುಳಿದ ವರ್ಗ ಅಥವಾ ದಲಿತರಿಗೆ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ಅನುಕೂಲ ಆಗುತ್ತದೆ ಎಂದರು.
ಬಂಗಾರಪ್ಪನವರ ಮಗ ಆಗಿದ್ದಕ್ಕೆ ನನಗೆ ಅಧ್ಯಕ್ಷ ಸ್ಥಾನ ಕೊಡುತ್ತಾರೆ ಅಂದರೆ ಯಡಿಯೂರಪ್ಪ ಮಗ ಅಂತ ವಿಜಯೇಂದ್ರಗೆ ಕೊಟ್ಟ ಹಾಗೇ ಆಗುತ್ತದೆ. ದೊಡ್ಡವರ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ನಾವು ದೊಡ್ಡವರಾಗುವುದಿಲ್ಲ. ಕಲಿಯಬೇಕು, ಸಂಯಮಬೇಕು, ಜನ ಸಾಮಾನ್ಯರ ಜೊತೆ ಇರಬೇಕು. ಎಲ್ಲರ ಅಭಿಪ್ರಾಯಗಳನ್ನು ಕೇಳುವ ತಾಳ್ಮೆ ಇರಬೇಕು. ಆದರೆ, ಈಗ ಅದು ಆಗಿಲ್ಲ ಎನ್ನುವುದು ನಮ್ಮ ವಾದ ಎಂದು ಕುಮಾರ ಬಂಗಾರಪ್ಪ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ರಾಜ್ಯ ಬಿಜೆಪಿಯಲ್ಲಿ ಪಕ್ಷ ಸಂಘಟನೆ ಬಿದ್ದು ಹೋಗಿದೆ, ಒಂದೇ ಕಡೆ ವಾಲಿದೆ. ಅದು ಸರಿ ಹೋಗಬೇಕು. ನಾವು ಯಾರೂ ಯಡಿಯೂರಪ್ಪ ವಿರುದ್ಧ ಮಾತನಾಡಿಲ್ಲ. ಜಿಲ್ಲಾ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅವರಿಗೆ ಬೇಕಾದವರಿಗೆ ಆಯ್ಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಕೆಜಿಪಿ ಟೀಂ ಆಗಿದೆ. ಜಿಲ್ಲಾ ಅಧ್ಯಕ್ಷರ ಚುನಾವಣೆಯಲ್ಲಿ ಕೆಜಿಪಿಯವರನ್ನೇ ನೇಮಕ ಮಾಡಿದ್ದಾರೆ ಎಂದು ಕುಮಾರ ಬಂಗಾರಪ್ಪ ಆರೋಪಿಸಿದರು.







