ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸಮರ್ಥರಾಗಿಲ್ಲ: ಕುಮಾರ ಬಂಗಾರಪ್ಪ

ಕುಮಾರ ಬಂಗಾರಪ್ಪ
ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಲು ಬಿ.ವೈ.ವಿಜಯೇಂದ್ರ ಸಮರ್ಥರಾಗಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ವಿಜಯೇಂದ್ರ ಅವರು ರಾಜ್ಯ ಬಿಜೆಪಿಯನ್ನು ಮುನ್ನಡೆಸಿ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಕಮಲವನ್ನು ಅರಳಿಸುವಷ್ಟು ಶಕ್ತರಾಗಿಲ್ಲ ಎಂದು ಆರೋಪಿಸಿದರು.
ಹನಿಟ್ರ್ಯಾಪ್ ಸಿಡಿ ಪಕ್ರರಣ, ಮುಡಾ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ವಿರೋಧ ಪಕ್ಷವಾಗಿ ಬಿಜೆಪಿಯಿಂದ ಪ್ರಬಲ ಹೋರಾಟಗಳನ್ನು ನಡೆಸಲು ವಿಜಯೇಂದ್ರ ವಿಫಲರಾಗಿದ್ದಾರೆ. ಅಷ್ಟೇ ಏಕೆ? ಇತ್ತೀಚೆಗಿನ ವಸತಿ ಇಲಾಖೆಯ ‘ಮನೆಗಾಗಿ ಮನಿ’ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿಯೂ ತೀಕ್ಷಣವಾದ ಧ್ವನಿಯೆತ್ತಲಿಲ್ಲ ಎಂದು ಟೀಕಿಸಿದರು.
ಹಾಗೇ, ವಿಜಯೇಂದ್ರ ಅವರು ಹೊಂದಾಣಿಕೆ (ಅಡ್ಜಸ್ಟ್ ಮೆಂಟ್) ರಾಜಕಾರಣಿ. ಬಿಜೆಪಿ ಪ್ರತಿಪಕ್ಷವಾಗಿದ್ದು ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟವನ್ನು ನಡೆಸಲು ಅವರು ವಿಫಲರಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಅವ್ಯವಾರ ನಡೆದಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡರೂ ಕಾಂಗ್ರೆಸ್ ಸರಕಾರದ ವಿರುದ್ಧ ಪರಿಣಾಮಕಾರಿಯಾದ ಹೋರಾಟ ನಡೆಸಿಲ್ಲ ಎಂದು ಆಪಾದಿಸಿದರು.