ಕಾಲ್ತುಳಿತ ಪ್ರಕರಣ | ಡಿ.ಕೆ.ಶಿವಕುಮಾರ್ರನ್ನು ಕೂಡಲೇ ಸಂಪುಟದಿಂದ ಹೊರ ಹಾಕಿ : ಎಚ್.ಡಿ.ಕುಮಾರಸ್ವಾಮಿ ಒತ್ತಾಯ

ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಗುರುವಾರ ಹೊಸದಿಲ್ಲಿ ಮಾತನಾಡಿದ ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧೈರ್ಯ ಎನ್ನುವುದು ಇದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಆಚೆ ಹಾಕಬೇಕು. ತನಗೆ ಪಿಆರ್ ಮಾಡುತ್ತಿರುವ ಕಂಪೆನಿಯೊಂದು ಬರೆದುಕೊಟ್ಟ ಸ್ಕ್ರಿಪ್ಟ್ನಂತೆ ಡಿಕೆಶಿ ಅವರು ನಿನ್ನೆ ಇಡೀ ದಿನದ ಡ್ರಾಮಾ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಕೆಶಿ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ರೀತಿಯ ಮಾನವೀಯತೆಯ ಗುಣಗಳು ಇಲ್ಲ. ವಿಧಾನಸೌಧ ಮೆಟ್ಟಿಲು ಮೇಲೆ ಇವರು ಕಾರ್ಯಕ್ರಮ ಮಾಡಿದ ಉದ್ದೇಶ ಏನು?. ಇಡೀ ಸರಕಾರ ಅದನ್ನು ಕುಟುಂಬ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿತ್ತು ಎಂದು ಅವರು ಟೀಕಿಸಿದರು.
ಈ ವ್ಯಕ್ತಿ ತೆವಲಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಸರಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಘಟನೆ ನಡೆದ ಹದಿನಾರು ಗಂಟೆಗಳ ನಂತರ ಇವರಿಗೆ ಕಣ್ಣೀರು ಬಂದಿದೆ. ಇವರು ಎಂತಹ ಕಟುಕರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ತನಿಖೆ ಎನ್ನುವುದು ಕೇವಲ ಜನರ ಕಣ್ಣೊರೆಸುವ ತಂತ್ರ ಅಷ್ಟೇ. ರಾಜಕೀಯದ ಪ್ರಶ್ನೆ ಇಲ್ಲ. ಈ ಮುಖ್ಯಮಂತ್ರಿಗೆ ನಾಡಿನ ಜನರ ಬಗ್ಗೆ ಗೌರವ ಇದ್ದರೆ, ಮೊದಲು ಈ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರಕ್ಕೆ ಹಾಕಬೇಕು ಎಂದು ಅವರು ಒತ್ತಾಯ ಮಾಡಿದರು.
‘ಗೃಹ ಸಚಿವರು ಎನ್ನುವವರು ರಾಜ್ಯದಲ್ಲಿ ಇಲ್ಲವೇ ಇಲ್ಲ. ಕೂರು ಎಂದರೆ ಕೂರು, ಏಳು ಎಂದರೆ ಏಳುತ್ತಾರೆ. ಕೇವಲ ಡ್ರಿಲ್ ಮಾಡುವ ಹೊಮ್ ಮಿನಿಸ್ಟರ್ ರಾಜ್ಯದಲ್ಲಿ ಇದ್ದಾರೆ. ಅವರಿಗೆ ಧೈರ್ಯ ಇಲ್ಲ. ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು, ಪಪಲೀಸ್ ಇಲಾಖೆಯ ಸಲಹೆ ಧಿಕ್ಕರಿಸಿ ಸರಕಾರ ನಡೆದುಕೊಂಡಿದೆ. ಒಬ್ಬ ಜಿಲ್ಲಾಧಿಕಾರಿ ಏನು ತನಿಖೆ ಮಾಡಲು ಸಾಧ್ಯ?’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ







