ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಕುಮಾರಸ್ವಾಮಿ: ರೈಲ್ವೆ ಯೋಜನೆಗಳು, ಸುಧಾರಿತ ಆಧಾರ್ ತಂತ್ರಜ್ಞಾನ ಅಳವಡಿಕೆ ಬಗ್ಗೆ ಚರ್ಚೆ

Photo| X
ಹೊಸದಿಲ್ಲಿ: ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು.
ಈಗಾಗಲೇ ರಾಜ್ಯಕ್ಕೆ ಹೈ ಸ್ಪೀಡ್ ರೈಲು ಕಾರಿಡಾರ್ಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲಾಗಿದೆ. ಈ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂದು ರೈಲ್ವೆ ಸಚಿವರು ತಮಗೆ ತಿಳಿಸಿದರು ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
ಇದಲ್ಲದೆ ಬೆಂಗಳೂರು-ಮುಂಬೈಗೆ ಹೊಸ ರೈಲು ಆರಂಭಿಸುವ ಬಗ್ಗೆ ಮಾಹಿತಿಯನ್ನು ರೈಲ್ವೆ ಸಚಿವರು ತಮಗೆ ನೀಡಿದರು. ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ನಡುವಿನ ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು. ಮಂಡ್ಯ ಲೋಕಸಭೆ ಕ್ಷೇತ್ರ ಸೇರಿದಂತೆ ಕರ್ನಾಟಕದ ಎಲ್ಲಾ ಬಾಕಿ ಇರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್ಪ್ರೆಸ್ ರಾಮನಗರದಲ್ಲಿ ನಿಲುಗಡೆಯನ್ನು ಕೋರಿ ಮನವಿ ಮಾಡಲಾಯಿತು ಎಂದು ಕುಮಾರಸ್ವಾಮಿ ಹೇಳಿದರು.
ಇದಲ್ಲದೆ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಕೂಡ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಯಿತು. ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜೊತೆ ನಡೆಸಿದ ಚರ್ಚೆ ಫ್ರಲಪ್ರದವಾಗಿತ್ತು. ತಮ್ಮ ಮನವಿಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರು ಉಪಸ್ಥಿತರಿದರು.






