ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆತುರ ತೋರಿದ್ದೇಕೆ?; ರಾಜ್ಯ ಸರಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕಾವೇರಿ ನದಿ ನೀರು ಪ್ರಾಧಿಕಾರ ನೀರು ಬಿಡಿ ಎಂದು ಸೂಚನೆ ನೀಡಿದಾಕ್ಷಣ ರಾಜ್ಯ ಸರಕಾರವು ತಡಮಾಡದೆ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು. ಅದು ಬಿಟ್ಟು ತಮಿಳುನಾಡಿಗೆ ನೀರು ಬಿಡುವ ಆತುರ ತೋರಿದ್ದೇಕೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಗಳವಾರ ಬಿಡದಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯ ಬಗ್ಗೆಯೆ ಕನ್ನಡಿಗರಿಗೆ ಭ್ರಮನಿರಸನ ಆಗುತ್ತಿದೆ ಎಂದು ನಾವು ಅತ್ಯಂತ ಆಕ್ರೋಶದಿಂದಲೆ ಹೇಳಲೇಬೇಕು. ತಮಿಳುನಾಡು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದರು.
ನಮ್ಮ ಜನರ ಹಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದೇವೆ. ಕೇಂದ್ರ ಸರಕಾರವೇನೂ ನಮಗೇನೂ ಇದಕ್ಕೆ ಹಣ ಕೊಟ್ಟಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಣೆಕಟ್ಟು ಇರುವುದು ನಮ್ಮಲ್ಲಿ, ಅದನ್ನು ಕಟ್ಟಿದ್ದು ನಾವು. 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂಡಿದ್ದೇವೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕಾ? ಎಂದು ಅವರು ಕಿಡಿಗಾರಿದರು.
ಎಷ್ಟು ವರ್ಷ ಈ ದಬ್ಬಾಳಿಕೆ ಸಹಿಸಲು ಸಾಧ್ಯ? ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕ್ತಾರಾ? ಅರೆಸೇನಾ ಪಡೆಯನ್ನು ಕರೆಸುತ್ತಾರಾ? ಕರೆಸಲಿ ನೋಡೋಣ. ಹೀಗೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರೆ ಸಹಿಸಲು ಸಾಧ್ಯವೇ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿ ಹೋರಾಟ ಮಾಡಲೇಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂಥ ಸಂದರ್ಭಗಳಲ್ಲಿ ಒಗ್ಗೂಡುತ್ತಾರೆ? ಹಾಗೆಯೇ ನಾವೂ ಒಗ್ಗೂಡಬೇಕು. ನಾನು ದಿಲ್ಲಿಗೆ ಹೋದಾಗ ಈ ಬಗ್ಗೆ ಮಾತನಾಡುತ್ತೇನೆ. ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂಬ ಕಾರಣಕ್ಕೆ ಇದರ ಬಗ್ಗೆ ಮಾತನಾಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ನೆರೆರಾಜ್ಯದ ಒತ್ತಡಕ್ಕೆ ಮಣಿದು ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ರಾಜ್ಯ ಸರಕಾರ ಪಟ್ಟು ಹಿಡಿಯಬೇಕಿತ್ತು. ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ಹೋಗಿರುವುದರಿಂದ ಕೋರ್ಟ್ ಆದೇಶ ಬರುವವರೆಗೂ ಕಾಯಬೇಕಿತ್ತು ಎಂದು ಅವರು ಹೇಳಿದರು.
ಮಳೆಯ ಅಭಾವದಿಂದ ಕೃಷಿಗೆ ನೀರು ಕೊಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹಾಕಿರುವ ಬೆಳೆಗಳಿಗೆ ಬೆಂಕಿ ಇಡುವ ಸ್ಥಿತಿಗೆ ರೈತರು ಬಂದಿದ್ದಾರೆ. ಇದರ ಜತೆ ಜತೆಗೆ ನಮ್ಮ ರೈತರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸಭೆಗಳು ನಡೆದಾಗ ನಮ್ಮ ರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸದೆ ಲಘುವಾಗಿ ತೆಗೆದುಕೊಂಡಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡುವಾಗ, ಎಐಸಿಸಿ ಅಧ್ಯಕ್ಷರು ಎಲ್ಲಿ ಹೋಗಿದ್ದರು. ತಮಿಳುನಾಡಿನವರು ಈ ವಿಚಾರ ಪ್ರಸ್ತಾಪ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆ ಯಾಕೆ ಮಾತನಾಡಲಿಲ್ಲ? ದೇವೇಗೌಡರು ರಾಜ್ಯದ ಜಲ ಸಂಕಷ್ಟವನ್ನು ಸದನದ ಮುಂದೆ ಇಟ್ಟರು. ಅವರು ಭಾಷಣ ಮಾಡುತ್ತಿದ್ದರೆ ತಮಿಳುನಾಡಿನ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಕಿಡಿಗಾರಿದರು.
ದೇವೇಗೌಡರ ಬಗ್ಗೆ ಅಪಪ್ರಚಾರ: ದೇವೇಗೌಡರು ದಿಲ್ಲಿಯಲ್ಲಿ ಕಾವೇರಿ ಬಗ್ಗೆ ಮಾತನಾಡುತ್ತಿದ್ದರೆ, ಕೆಲವರು ಮೈತ್ರಿ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ದೇವೇಗೌಡರು ಹೋಗಿರುವುದು ಕಾವೇರಿ ಬಗ್ಗೆ ಮಾತಾಡಲು ಅಲ್ಲ ಅಂತ ಮಂಡ್ಯದ ಮಹಾ ನಾಯಕರು ಒಬ್ಬರು ಹೇಳಿದ್ದಾರೆ. ಇವರೆಲ್ಲಾ ನಿನ್ನೆ ಮೊನ್ನೆ ಬಂದವರು. ದೇವೇಗೌಡರ ಬದ್ಧತೆ ಬಗ್ಗೆ ಇವರಿಗೇನು ಗೊತ್ತು? ಎಂದು ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಜರಿದ್ದರು.







