ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ಎಲ್. ನಾರಾಯಣಸ್ವಾಮಿ ನೇಮಕ
►ಭ್ರಷ್ಟಾಚಾರ ಆರೋಪ ಹೊತ್ತಿರುವ ಶ್ಯಾಮ್ ಭಟ್ ರನ್ನು ಸದಸ್ಯರನ್ನಾಗಿ ನೇಮಿಸಿದ ಸರಕಾರ

ನ್ಯಾ. ಎಲ್. ನಾರಾಯಣಸ್ವಾಮಿ (Photo: youtube/CLPR Trust)
ಬೆಂಗಳೂರು: ಎಂಟು ತಿಂಗಳಿನಿಂದ ಖಾಲಿ ಇದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರ ಜೊತೆಗೆ ಇಬ್ಬರು ಸದಸ್ಯರನ್ನು ಸಹ ಸರಕಾರ ನೇಮಕಗೊಳಿಸಿದ್ದು, ನಿವೃತ್ತ ಜಿಲ್ಲಾ ನ್ಯಾಯದೀಶ ಎಸ್.ಕೆ.ವಂಟಿಗೋಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ.
ನೂತನ ಅಧ್ಯಕ್ಷರು ಹಾಗೂ ಸದಸ್ಯರು ಐದು ವರ್ಷ ಅಥವಾ 70 ವರ್ಷ ವಯಸ್ಸಾಗುವವರೆಗೆ ಈ ಎರಡರಲ್ಲಿ ಯಾವುದು ಮೊದಲೇ ಅಲ್ಲಿಯವರೆಗೆ ಅಧಿಕಾರವಧಿಯನ್ನು ಹೊಂದಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ಆರೋಪ ಹೊತ್ತಿರುವ ಶ್ಯಾಮ್ ಭಟ್ ನೇಮಕ:
ಹಲವು ಭ್ರಷ್ಟಾಚಾರ ಆರೋಪ ಹೊತ್ತಿರುವ ಶ್ಯಾಮ್ ಭಟ್ ಅವರನ್ನು ಸರಕಾರ ಮಾನವ ಹಕ್ಕುಗಳ ಆಯೋಗಕ್ಕೆ ನೇಮಕ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶ್ಯಾಮ್ ಭಟ್ ಸಾರ್ವಜನಿಕರು ಹಾಗೂ ರೈತರಿಗೆ ನಿವೇಶನ ವಿತರಣೆ ಮಾಡುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.







