ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ಈ ವರ್ಷದೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ದೊರೆಯಲಿದೆ ಇ-ಸ್ವತ್ತು: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿನ ವಿಳಂಬ ನಿವಾರಣೆಗೆ ನಿಯಮಗಳ ತಿದ್ದುಪಡಿ ಮಾಡಲಾಗಿದ್ದು, ಈ ವರ್ಷದ ಅಂತ್ಯದವರೆಗೂ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬುಧವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1,50,69,090 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಉಳಿದ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಾಗಿದ್ದು, ವ್ಯಾಜ್ಯ ರಹಿತ, ಸರಕಾರಿ, ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ ಮುಂದಿನ ವರ್ಷಾಂ ತ್ಯದೊಳಗೆ ಇ-ಸ್ವತ್ತು ನೀಡಲು 5927 ಗ್ರಾಮ ಪಂಚಾಯತಿಗಳಿಗೂ ಗುರಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ಬೆಂಗಳೂರು ನಗರ, ಮಂಗಳೂರು, ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಗಳ ಸಿಇಓಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಿ, ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆಗಳನ್ನು ವಿತರಿಸಲು ಭೂ-ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲ 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮಠಾಣ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಅದೇ ರೀತಿ ಕಂದಾಯ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಪರಿವರ್ತನೆ ಆದ ಭೂಮಿ ಮತ್ತು ಪರಿವರ್ತನೆ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಬಿ ಖರಾಬು ಭೂಮಿ ಇಲ್ಲದ ಸರ್ವೆ ಸಂಖ್ಯೆ ಸ್ವತ್ತುಗಳಿಗೂ ಇ-ಸ್ವತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತ ವೆಂಕಟರಾಜಾ, ಬೆಳಗಾವಿ ಸಿಇಓ ರಾಹುಲ್ ಶಿಂಧೆ ಮತ್ತು ಇ-ಆಡಳಿತ ನಿರ್ದೇಶಕ ಗಿರೀಶ್ ದಿಲೀಪ್ ಬದೋಲೆ ಮತ್ತಿತರರು ಪಾಲ್ಗೊಂಡಿದ್ದರು.
ಕಣ ಮನೆ, ಮನೆದಳಕ್ಕೂ ಇ-ಸ್ವತ್ತು :
ಮಲೆನಾಡು ಭಾಗದ ಜನರ ವಾಸಸ್ಥಳಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಕಣ ಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ, ನಿಯಮಾನುಸಾರ ಇ-ಸ್ವತ್ತು ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. 4000 ಚದರಡಿಯವರೆಗಿನ ಸ್ವತ್ತಿಗೆ ಈ ಸೌಲಭ್ಯ ಲಭಿಸಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸಹಾಯವಾಣಿ
ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ತೊಡಕಾದರೆ ಅವರು ಸಹಾಯವಾಣಿ 9483476000 ನ್ನು ಸಂಪರ್ಕಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.






